ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ತೆರವಿಲ್ಲ: ಈಶ್ವರ ಖಂಡ್ರೆ

Update: 2024-08-27 18:19 GMT

ಈಶ್ವರ ಖಂಡ್ರೆ

ಬೆಂಗಳೂರು: ಅರಣ್ಯ ಒತ್ತುವರಿ ತೆರವು ಕಾನೂನು ಪ್ರಕ್ರಿಯೆಯಾಗಿದ್ದು, ದೊಡ್ಡ ಮತ್ತು 2015ರ ನಂತರದ ಅರಣ್ಯ ಒತ್ತುವರಿಯನ್ನು ಮಾತ್ರ ತೆರವು ಮಾಡಿಸಲಾಗುತ್ತಿದೆ. ಆದರೆ, ಯಾವುದೇ ವದಂತಿಗಳಿಗೆ ಮರುಳಾಗಬಾರದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡು ಮತ್ತು ಕರಾವಳಿಯಲ್ಲಿ ಕೆಲವರು ಅರಣ್ಯ ಒತ್ತುವರಿ ತೆರವಿಗೆ ವಿರೋಧಿಸುತ್ತಿದ್ದು, ಈ ವಿಚಾರದಲ್ಲಿ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಬಡವರ ಭೂಮಿ ಒತ್ತುವರಿ ತೆರವು ಮಾಡಿಸುತ್ತಿಲ್ಲ. ಬದಲಾಗಿ ದೊಡ್ಡ ಒತ್ತುವರಿ ಮತ್ತು 2015ರ ನಂತರದ ಒತ್ತುವರಿಯನ್ನು ಮಾತ್ರ ತೆರವು ಮಾಡಲು ಸೂಚಿಸಿರುವುದಾಗಿ ಸ್ಪಷ್ಟನೆ ನೀಡಿದರು.

2015ಕ್ಕೆ ಮೊದಲು ಜೀವನೋಪಾಯಕ್ಕಾಗಿ ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವವರಿಗೆ ತೊಂದರೆ ನೀಡದಂತೆ, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಇತ್ಯರ್ಥ ಆಗದೆ ಬಾಕಿ ಉಳಿದಿದ್ದಲ್ಲಿ ಅಂತಹ ಜಮೀನು, ಮನೆಯನ್ನು ತೆರವು ಮಾಡಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು.

ಶಿರೂರಿನಲ್ಲಿ ಗುಡ್ಡ ಕುಸಿದು 11 ಜನರು ಸಾವಿಗೀಡಾಗಿದ್ದರೆ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 316ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಎರಡು ಘಟನೆಗಳು ಎಚ್ಚರಿಕೆಯ ಗಂಟೆಯಾಗಿದ್ದು, ನದಿಗಳ ಮೂಲ ಮತ್ತು ಜೀವವೈವಿಧ್ಯದ ತಾಣವಾದ ಪಶ್ಚಿಮ ಘಟ್ಟ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಅರಣ್ಯ ಹಕ್ಕು ಕ್ರಮ: ರಾಜ್ಯ ಸರಕಾರ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಗಳ ಪುನರ್ ಪರಿಶೀಲನೆ ಪ್ರಕ್ರಿಯೆ ಪೂರ್ಣವಾಗುವವರೆಗೆ ಒತ್ತುವರಿ ತೆರವು ಮಾಡದಂತೆ ಸೂಚಿಸಿದೆ ಎಂದು ಅವರು ಹೇಳಿದರು.

ಜೊತೆಗೆ ಅರಣ್ಯ ವಾಸಿ ಅನುಸೂಚಿತ ಬುಡಕಟ್ಟು ಸಮುದಾಯದವರಿಗೆ ಸಮಾನವಾಗಿ ಇತರ ಪಾರಂಪರಿಕ ಅರಣ್ಯ ವಾಸಿಗಳನ್ನೂ ಪರಿಗಣಿಸುವ ಸಲುವಾಗಿ ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ 2006 ಮತ್ತು ಅದರಡಿ ಮಾಡಲಾದ ನಿಯಮಗಳನ್ನು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಮಾರ್ಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಇತ್ತೀಚೆಗೆ ನಿರ್ಣಯಿಸಲಾಗಿದೆ ಎಂದು ಉಲ್ಲೇಖಿಸಿದರು.

2015ರವರೆಗೆ ಅರಣ್ಯ ಒತ್ತುವರಿ ಎಷ್ಟು?: 2015ರಲ್ಲಿ ಸರಕಾರದ ನಡಾವಳಿಯಲ್ಲಿ 30 ಎಕರೆಗೂ ಹೆಚ್ಚು ಒತ್ತುವರಿಯ 133 ಪ್ರಕರಣಗಳಿವೆ. 10ರಿಂದ 30 ಎಕರೆವರೆಗಿನ ಒತ್ತುವರಿಯ 718 ಪ್ರಕರಣವಿದ್ದು, 12898 ಎಕರೆ ಅರಣ್ಯ ಒತ್ತುವರಿ ಮಾಡಲಾಗಿದೆ. 3ರಿಂದ 10 ಎಕರೆವರೆಗಿನ ಒತ್ತುವರಿಯ 23423 ಪ್ರಕರಣವಿದ್ದು, ಇದರ ಒತ್ತುವರಿ ಪ್ರದೇಶ 71108 ಎಕರೆಯಾಗಿದೆ. 3 ಎಕರೆಗಿಂತ ಕಡಿಮೆ ವಿಸ್ತೀರ್ಣದ ಒತ್ತುವರಿಯ 86352 ಪ್ರಕರಣಗಳಿದ್ದು, 1150089.25ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News