ಕಾಂಗ್ರೆಸ್ಸಿಗರಿಗೆ ಡಾ.ಅಂಬೇಡ್ಕರ್ ಫೋಟೊ ಹಿಡಿಯುವ ಯೋಗ್ಯತೆ ಇಲ್ಲ : ಆರ್.ಅಶೋಕ್ ಟೀಕೆ
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ನಿರಂತರ ಅವಮಾನ ಮಾಡಿದ ಕಾಂಗ್ರೆಸ್ಸಿಗರಿಗೆ ಅವರ ಭಾವಚಿತ್ರವನ್ನು ಹಿಡಿಯುವ ಯೋಗ್ಯತೆಯೂ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿದರು.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತಾವು ಡಾ.ಅಂಬೇಡ್ಕರ್ ಪರ ಇರುವುದಾಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ? ಅವರ ಫೋಟೊ ಹಿಡಿಯುವ ಅಧಿಕಾರ, ಯೋಗ್ಯತೆ ಇವರಿಗೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದ ಚುನಾವಣೆಯಲ್ಲಿ ಎರಡು ಬಾರಿ ಇಡೀ ಕಾಂಗ್ರೆಸ್ ಪಕ್ಷವೇ ಬಂದು ಅಂಬೇಡ್ಕರರನ್ನು ಸೋಲಿಸಿ ಸಂಭ್ರಮ ಆಚರಿಸಿದ್ದರು. ಪಟಾಕಿ ಹೊಡೆದಿದ್ದರು. ನಿಮಗೆ ನಾಚಿಕೆ ಆಗುವುದಿಲ್ಲವೇ?. ಸಂವಿಧಾನ ಬರೆದ ಡಾ.ಅಂಬೇಡ್ಕರ್‌ಅವರು ತೀರಿಕೊಂಡಾಗ ಆರಡಿ-ಮೂರಡಿ ಜಾಗವನ್ನೂ ಕೊಡಲಿಲ್ಲ ಎಂದು ದೂರಿದರು.
ನೆಹರೂ, ಇಂದಿರಾಗಾಂಧಿಗೆ ಭಾರತ ರತ್ನ, ರಾಜೀವ್ ಗಾಂಧಿಗೂ ಭಾರತ ರತ್ನ. ಆದರೆ, ಡಾ.ಅಂಬೇಡ್ಕರ್‌ಗೆ ಇವರು ಯಾಕೆ ಭಾರತರತ್ನ ಕೊಟ್ಟಿಲ್ಲ? ಫೋಟೊ ಹಿಡಿದುಕೊಂಡು ಬಂದಿದ್ದೀರಲ್ಲವೇ?, ಡಾ.ಅಂಬೇಡ್ಕರ್ ಅವರಿಗೆ ಯಾಕೆ ಭಾರತ ರತ್ನ ಕೊಟ್ಟಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಿಜೆಪಿ ಬೆಂಬಲಿತ ಸರಕಾರವು ಭಾರತ ರತ್ನ ನೀಡಿದೆ. ಲಂಡನ್ ಸೇರಿದಂತೆ ವಿವಿಧೆಡೆ ಡಾ.ಅಂಬೇಡ್ಕರ್ 5 ಪ್ರಮುಖ ಕೇಂದ್ರಗಳನ್ನೂ ಅಭಿವೃದ್ಧಿ ಮಾಡಿದ್ದೇವೆ. ಭಗವದ್ಗೀತೆಯಷ್ಟೇ ಪವಿತ್ರವಾದುದು ಈ ಸಂವಿಧಾನ ಎಂದು ಪ್ರಧಾನಿ ಮೋದಿ ಸಂಸತ್‍ಗೆ ತೆರಳುವಾಗ ಹೇಳಿದ್ದಾರೆ ಎಂದು ಗಮನ ಸೆಳೆದರು.