‘ಎತ್ತಿನಹೊಳೆ ಯೋಜನೆ’ ಶೀಘ್ರದಲ್ಲೇ ನಾನೇ ಖುದ್ದು ಪರಿಶೀಲಿಸುವೆ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜು. 4: ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಸದ್ಯದಲ್ಲೇ ನಾನೇ ಖುದ್ದು ಪರಿಶೀಲನೆ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಧರಣಿ ಗದ್ದಲದ ಮಧ್ಯೆ ಪ್ರಶ್ನೋತ್ತರ ವೇಳೆ ಜೆಡಿಎಸ್ ಸದಸ್ಯ ಕೆ.ಎಸ್.ಪುಟ್ಟಸ್ವಾಮಿ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎತ್ತಿನಹೊಳೆ ಯೋಜನೆಯ ಕಾಮಗಾರಿ ಪರಿಶೀಲನೆ ಮಾಡಿ ಮೊದಲು ನೀರು ತರಲು ಆದ್ಯತೆ ನೀಡಲಾಗುವುದು. ನಂತರ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.
‘ಗೌರಿಬಿದನೂರು ಕ್ಷೇತ್ರಕ್ಕೆ ಸದ್ಯದಲ್ಲೇ ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸುವೆ. ತಾಲೂಕಿನಲ್ಲಿ 51.78 ಕಿ.ಮೀ ಪೈಪ್‍ಲೈನ್ ಅಳವಡಿಸಲು ಮಂಜೂರಾಗಿದ್ದು, ಈ ಪೈಕಿ 48.25 ಕಿ.ಮೀ ಪೈಪ್‍ಲೈನ್ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ. ಉಳಿದ 3.62ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕಿನಲ್ಲಿ ಕುಡಿಯುವ ನಿರೀಗಾಗಿ 86 ಕೆರೆಗಳಿಗೆ ಶೇ.50ರಷ್ಟು ನೀರು ತುಂಬಿಸಲು ಉದ್ದೇಶಿಸಲಾಗಿದೆ ಎಂದು ಉತ್ತರಿಸಿದರು.