ವಾಲ್ಮೀಕಿ ನಿಗಮದಲ್ಲಿ ಅಕ್ರಮ ಪ್ರಕರಣ | ಮಾಜಿ ಸಚಿವ ಬಿ.ನಾಗೇಂದ್ರಗೆ ಜಾಮೀನು ಮಂಜೂರು

Update: 2024-10-14 16:48 GMT

ಬಿ.ನಾಗೇಂದ್ರ

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಬಿ. ನಾಗೇಂದ್ರ ಅವರಿಗೆ 2 ಲಕ್ಷ ರೂಪಾಯಿ, ಇಬ್ಬರ ಶ್ಯೂರಿಟಿ ಹಾಗೂ ಸಾಕ್ಷ್ಯ ನಾಶಪಡಿಸದಂತೆ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನನ್ನು ಮಂಜೂರು ಮಾಡಿದೆ. ನ್ಯಾಯಾಲಯದ ಆದೇಶ ಪ್ರತಿ ದೊರೆತ ಬಳಿಕ ಜೈಲಾಧಿಕಾರಿಗಳು ಬಿಡುಗಡೆ ಪ್ರಕ್ರಿಯೆ ನಡೆಸಲಿದ್ದು, ನಾಳೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ಮೂರು ತಿಂಗಳ ಹಿಂದೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶಾನಾಲಯ(ಈಡಿ)ದ ಅಧಿಕಾರಿಗಳು 187ಕೋಟಿ ರೂ. ಹಗರಣ ಆರೋಪ ಸಂಬಂಧ 4,970 ಪುಟಗಳ ಚಾರ್ಜ್‍ಶೀಟ್ ಜೊತೆಗೆ 144 ಪುಟಗಳ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿ.ನಾಗೇಂದ್ರ, ಹೈದರಾಬಾದ್ ಫಸ್ಟ್ ಕ್ರೆಡಿಟ್ ಕೋಆಪರೇಟಿವ್ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ್, ಬ್ಯಾಂಕ್ ಅಧ್ಯಕ್ಷ ಇಟಕಾರಿ ಸತ್ಯನಾರಾಯಣ, ವಾಲ್ಮೀಕಿ ನಿಗಮದ ಎಂ.ಡಿ. ಜೆ.ಜಿ.ಪದ್ಮನಾಭ, ಸಹಚರರಾದ ನಾಗೇಶ್ವರ ರಾವ್, ನೆಕ್ಕುಂಟಿ ನಾಗರಾಜ್ ಹಾಗೂ ವಿಜಯ್ ಕುಮಾರ್ ಗೌಡ ಸೇರಿದಂತೆ 24 ಮಂದಿ ಶಾಮೀಲಾಗಿರುವ ಆರೋಪ ಕೇಳಿಬಂದಿತ್ತು.

ಪ್ರಕರಣದಲ್ಲಿ ಬಿ.ನಾಗೇಂದ್ರ ಸೇರಿದಂತೆ ಇತರ ಆರೋಪಿಗಳ ಪಾತ್ರ ಹಾಗೂ ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಣದ ದುರ್ಬಳಕೆ ಕುರಿತಂತೆ ತನಿಖಾ ವರದಿಯನ್ನು ಅಧಿಕಾರಿಗಳು ಸಲ್ಲಿಸಿದ್ದು, ನ್ಯಾಯಾಲಯದಿಂದ ಸ್ವೀಕೃತವಾಗಿರುವುದಾಗಿ ಪ್ರಕಟನೆಯಲ್ಲಿ ಈ.ಡಿ. ತಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News