ಹಿಟ್ಲರ್ ಸರ್ಕಾರದಂತೆ ವರ್ತಿಸಿದರೆ ಅನ್ನದಾತರು ಮೋದಿ ಸರ್ಕಾರಕ್ಕೆ ಪಾಠ ಕಲಿಸದೇ ಬಿಡುವುದಿಲ್ಲ‌: ದಿನೇಶ್‌ ಗುಂಡೂರಾವ್‌

Update: 2024-02-22 06:26 GMT

ಬೆಂಗಳೂರು: ಪ್ರತಿಭಟನೆ ನಿರತ ರೈತರ ಮೇಲಿನ ದಾಳಿಯಿಂದ ಬೀಳುವ ಒಬ್ಬೊಬ್ಬ ರೈತನ ಹೆಣವು ಕೇಂದ್ರ ಸರ್ಕಾರದ ಶವ ಪೆಟ್ಟಿಗೆಗೆ ಬೀಳುವ ಕೊನೆಯ ಮೊಳೆಗಳು ಎಂಬುದನ್ನು ಮೋದಿಯವರು ಅರ್ಥ ಮಾಡಿಕೊಳ್ಳಲಿ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,  ತಮ್ಮ ನ್ಯಾಯಯುತವಾದ ಬೇಡಿಕೆಗಾಗಿ ಹೋರಾಟ ಮಾಡುತ್ತಿರುವ ರೈತರ ಮೇಲೆ‌ ಹರ್ಯಾಣದ BJP ಸರ್ಕಾರ ಅಶ್ರುವಾಯು ಸಿಡಿಸಿ ಯುವರೈತನ ಬಲಿ ತೆಗೆದುಕೊಂಡಿದೆ. ದೇಶಕ್ಕೆ ಅನ್ನ ಕೊಡುವ ರೈತರ ಹೋರಾಟವನ್ನು ಕೇಂದ್ರ ಸರ್ಕಾರ ತನ್ನ ವಿರುದ್ಧದ ದಂಗೆಯಂತೆ ಭಾವಿಸುತ್ತಿದೆ. ಹಾಗಾಗಿಯೇ ರೈತ ಚಳವಳಿಯನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕುವ ದುರಳ ಕೆಲಸಕ್ಕೆ ಕೇಂದ್ರ ಕೈ ಹಾಕಿದೆ. ಖಂಡಿತವಾಗಿಯೂ ಇದು ಸಲ್ಲದು. ರೈತರ ಬೇಡಿಕೆಯನ್ನು ಕಿವಿಗೊಟ್ಟು ಕೇಳುವ ಸಹನೆಯನ್ನು ಕೇಂದ್ರ ಬೆಳೆಸಿಕೊಳ್ಳಬೇಕು. ಹಿಟ್ಲರ್ ಸರ್ಕಾರದಂತೆ ವರ್ತಿಸಿದರೆ ಅನ್ನದಾತರು ಮೋದಿ ಸರ್ಕಾರಕ್ಕೆ ಪಾಠ ಕಲಿಸದೇ ಬಿಡುವುದಿಲ್ಲ‌ ಎಂದು ಹೇಳಿದ್ದಾರೆ.

ರೈತರು ದೆಹಲಿ‌ ಪ್ರವೇಶಿಸದಂತೆ ಗೋಡೆ‌‌ ನಿರ್ಮಿಸುವುದು, ರಸ್ತೆಗೆ ಮೊಳೆ ಹೊಡೆಯುವುದು, ಕಲ್ಲುಗಳನ್ನು ಇಡುವುದು, ರೈತರ ಮೇಲೆ ಅಶ್ರುವಾಯು ಸಿಡಿಸುವುದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ನಡೆಯೇ ? ಹಿಂದಿನ ಯಾವ ಸರ್ಕಾರಗಳು ರೈತರ ವಿರುದ್ಧ ಇಷ್ಟು ಕ್ರೂರವಾಗಿ ನಡೆದುಕೊಂಡ ಇತಿಹಾಸವಿಲ್ಲ. ಮೋದಿಯವರಿಗೆ ರೈತರನ್ನು ಕಂಡರೆ ಇಷ್ಟು ದ್ವೇಷವೇಕೆ‌ ? ಪ್ರಧಾನಿಯಾದವರಿಗೆ ರೈತರ ಗೋಳು ಕೇಳದಷ್ಟು ವ್ಯವಧಾನ ಇಲ್ಲವೇ ? ಎಂದು ಪ್ರಶ್ನಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News