ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತು ಸೆ.11ರಂದು ಅಂತಿಮ ತೀರ್ಮಾನ: ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ(ಸೆ.06): ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತು ಸೆ.11ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಸದ್ಯ ಎಡದಂಡೆ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಭದ್ರಾ ನೀರು ನಿರ್ವಹಣಾ ಸಲಹಾಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ನೀರು ನಿರ್ವಹಣಾ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯ ಚರ್ಚೆಗಳ ಕುರಿತು ಉಪ ಮುಖ್ಯಮಂತ್ರಿ, ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಡಿ.ಕೆ.ಶಿವಕಮಾರ್ ಅವರ ಗಮನಕ್ಕೆ ತರಲಾಗುತ್ತದೆ. ಸೆ.11ರಂದು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು.
ಭದ್ರ ಎಡದಂಡೆ ನಾಲೆಯಿಂದ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ತೀರ್ಮಾನವಾಗಿದೆ. ತಕ್ಷಣದಿಂದಲೆ ನೀರು ನಿಲ್ಲಿಸಲಾಗುತ್ತದೆ. ಬಲದಂಡೆಯಲ್ಲಿ ನೀರಿನ ಪ್ರಮಾಣ ತಗ್ಗಿಸಲಾಗುತ್ತದೆ ಎಂದರು.
ಹೆಚ್ಚು ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಮಳೆ ಪ್ರಮಾಣ ವಾಡಿಕೆಗಿಂತಲು ತುಂಬಾ ಕಡಿಮೆಯಾಗಿದೆ. ಜಲಾಯಶಯದ ಒಳ ಹರಿವು ಸಂಪೂರ್ಣ ಇಳಿಮುಖವಾಗಿದೆ. ಇಂತಹ ಸಂದರ್ಭ ನೀರು ನಿಲ್ಲಿಸಿದರೆ ಆ ಭಾಗದ ರೈತರಿಗೆ ಸಮಸ್ಯೆ, ಹರಿಸಿದರೆ ಈ ಭಾಗದ ರೈತರು ಮತ್ತು ಭವಿಷ್ಯದಲ್ಲಿ ತೊಂದರೆಯಾಗಲಿದೆ. ಭತ್ತ ಬೆಳೆಯಬಾರದು ಎಂದು ಈ ಮೊದಲೆ ಸೂಚನೆ ನೀಡಲಾಗಿತ್ತು. ಆದರೂ ರೈತರು ಭತ್ತ ಬೆಳೆದಿದ್ದಾರೆ. ಈ ಹಿನ್ನೆಲೆ ಎಲ್ಲವನ್ನು ಪರಿಶೀಲಿಸಲು ನಾಲ್ಕೈದು ದಿನ ಸಮಯ ಬೇಕಿದೆ. ರಾಜ್ಯಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು
ನಂತರ ರೈತ ಮುಖಂಡ ಕೆ ಟಿ ಗಂಗಾಧರ್ ಮಾತನಾಡಿ,ಸಭೆಯಲ್ಲಿ ಬಹಳ ಒಳ್ಳೆ ನಿರ್ಧಾರಗಳು ಆಗಿವೆ.ನಮ್ಮ ಭದ್ರಾ ಅಚ್ಚಕಟ್ಟು ರೈತರನ್ನು ಗಮನದಲ್ಲಿ ಇಟ್ಟುಕೊಂಡು. ಎಡದಂಡೆ ನೀರನ್ನು ಇಂದಿನಿಂದಲೇ ನಿಲ್ಲಿಸಲು ಸೂಚನೆ ನೀಡಿದ್ದೇವೆ. ಬಲದಂಡೆಯಲ್ಲಿ ನೀರನ್ನು ಕಡಿಮೆ ಮಾಡಲು ತಿಳಿಸಲಾಗಿದೆ ಎಂದರು.
ಇನ್ನು ಮೂರುದಿನಗಳಲ್ಲಿ ಸಂಪೂರ್ಣವಾಗಿ ನಿಲ್ಲಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಎಲ್ಲ ನಾಲೆಗಳಲ್ಲಿ ಜಂಗಲ್ ಕ್ಲಿಯರ್ ಮಾಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ದಾವಣಗೆರೆ ಶಿವಮೊಗ್ಗ ಎಂಬ ಬೇಧಭಾವ ಮಾಡಿಕೊಳ್ಳದೇ ರೈತರು ಸಹಕರಿಸಬೇಕಿದೆ.ಭತ್ತ ಬೆಳೆಯುವ ರೈತರನ್ನು ಉಳಿಸಲು ಸರ್ಕಾರ ಬದ್ಧವಾಗಿದೆ ಎಂದರು.