ಯಡಿಯೂರಪ್ಪ ವಿರುದ್ಧ ಪೋಕ್ಸೋ ಅಡಿ ಎಫ್‌ಐಆರ್ ದಾಖಲು; ಪ್ರಕರಣದ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ: ಜಿ. ಪರಮೇಶ್ವರ್

Update: 2024-03-15 13:41 GMT

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಅಡಿ ಎಫ್‌ ಐ ಆರ್ ದಾಖಲಾಗಿದ್ದು, ಈ ಪ್ರಕರಣದ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಮಹಿಳೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾನೂನು ರೀತಿಯಲ್ಲಿ ಪೊಲೀಸರು ತನಿಖೆ ನಡೆಸಲಿದ್ದು, ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದರು.

ರಾಜ್ಯದ ಒಬ್ಬ ಮಾಜಿ ಮುಖ್ಯಮಂತ್ರಿ ವಿರುದ್ದ ಪ್ರಕರಣ ದಾಖಲಾಗಿರುವುದು ಅತ್ಯಂತ ಸೂಕ್ಷ್ಮ ವಿಷಯ. ಅಗತ್ಯವಿದ್ದರೆ ಸಂತ್ರಸ್ತ ಮಹಿಳೆಗೆ ರಕ್ಷಣೆ ಕೊಡುತ್ತೇವೆ. ಯಡಿಯೂರಪ್ಪ ಅವರನ್ನು ವಶಕ್ಕೆ ಪಡೆಯುವ ವಿಚಾರ ತನಿಖೆ ಆಧಾರದ ಮೇಲೆ ನಿರ್ಧಾರವಾಗಲಿದೆ ಎಂದು ಅವರು ವಿವರ ನೀಡಿದರು.

 ಕೆಲವರು ದೂರು ಕೊಟ್ಟ ಮಹಿಳೆಗೆ ಮಾನಸಿಕ ಅಸ್ವಸ್ಥತೆ ಇದೆ ಎನ್ನುತ್ತಿದ್ದಾರೆ

ಗುರುವಾರ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಪೂರ್ಣಗೊಳ್ಳುವ ತನಕ ಏನೂ ಹೇಳಲು ಆಗುವುದಿಲ್ಲ.ಕೆಲವರು ದೂರು ಕೊಟ್ಟ ಮಹಿಳೆಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳುತ್ತಾರೆ. ದೂರು ದಾಖಲಾದ ಕಾರಣ ಯಾರನ್ನೂ ವಶಕ್ಕೆ ಪಡೆದ ವಿಚಾರಣೆ ನಡೆಸಲ್ಲ ಎಂದು ಅವರು ತಿಳಿಸಿದರು.

ಇನ್ನೂ, ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತದೆ, ದೂರಿನಲ್ಲಿರುವ ಅಂಶಗಳ ಸತ್ಯಾಸತ್ಯತೆಯನ್ನು ಅರಿಯುವ ಕೆಲಸವಾಗುತ್ತದೆ. ಅದಾದ ಬಳಿಕವೇ ಅಗತ್ಯ ಬಿದ್ದರೆ ಮಾತ್ರ ಯಡಿಯೂರಪ್ಪ ಅವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News