ಅನುದಾನ ಬಿಡುಗಡೆಗೆ ಪಟ್ಟು; ಡಿಕೆಶಿಯನ್ನು ಪತ್ತೆಹಚ್ಚಿ ಕಾಲಿಗೆ ಬಿದ್ದ ಬಿಜೆಪಿ ಶಾಸಕ ಮುನಿರತ್ನ..!
ಬೆಂಗಳೂರು, ಅ.11: ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅನುದಾನ ರದ್ದುಗೊಳಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಏಕಾಂಗಿ ಆಗಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕ ಮುನಿರತ್ನ, ಆನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇರುವ ಸ್ಥಳವನ್ನು ಪತ್ತೆಹಚ್ಚಿ ಅಲ್ಲಿಗೆ ತೆರಳಿದಲ್ಲದೆ, ಕಾಲಿಗೆ ಬಿದ್ದು ಮನವಿ ಸಲ್ಲಿಸಿದ ನಾಟಕೀಯ ಪ್ರಸಂಗ ಬುಧವಾರ ಜರುಗಿತು.
ಇಲ್ಲಿನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮೌನ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕ ಮುನಿರತ್ನ, ಉದ್ಯಾನವನ ಸೇರಿದಂತೆ ಒಟ್ಟು 126 ಕೋಟಿ ರೂ ಅನುದಾನ ರದ್ದಾಗಿರುವುದು ಮಾತ್ರವಲ್ಲದೆ, ಆರ್.ಆರ್.ನಗರ ಕ್ಷೇತ್ರದ ಅನುದಾನವನ್ನು ಮೂರು ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಆನಂತರ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿರುವ ಮಾಹಿತಿ ಪಡೆದ ಮುನಿರತ್ನ, ಪ್ರತಿಭಟನೆ ಜಾಗದಿಂದ ನೇರವಾಗಿ ಇಲ್ಲಿನ ಅರಮನೆ ಮೈದಾನಕ್ಕೆ ಹಾಜರಾಗಿ ಮನವಿ ಸಲ್ಲಿಸಲು ಬಂದಿರುವುದಾಗಿ ಹೇಳಿ ಸಭೆಯ ಬಳಿ ಕೆಲಕಾಲ ಗೊಂದಲ ಮೂಡಿಸಿದರು.
ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್ ವೇದಿಕೆ ಮೇಲಿಂದಲೇ ಪ್ರತಿಕ್ರಿಯಿಸಿ, ನಾಟಕ ಮಾಡಬೇಕು ಎಂದು ಇಲ್ಲಿಗೆ ಬಂದಿದ್ದಾರೆ, ಅವರನ್ನು ನಿಧಾನಕ್ಕೆ ಭೇಟಿಯಾಗೋಣ. ನಾಟಕ ಮಾಡುವ, ಸಿನಿಮಾ ತೆಗೆಯುವ ನಿರ್ಮಾಪಕರಲ್ಲವೇ ಅವರದ್ದು. ಒಂದೊಂದು ಕತೆ ಇರುತ್ತದೆ, ಇವನ್ನೆಲ್ಲಾ ಅರಗಿಸಿಕೊಳ್ಳೊಣ. ನಡೆ ಮುಂದೆ, ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ನಾವು ಮುನ್ನಡೆಯಬೇಕು ಎಂದು ಛೇಡಿಸಿದರು.
ಅವರದ್ದು ಏನೋ ತೊಂದರೆ ಇದೆ. ಆದರೆ ಈ ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ಅದನ್ನು ಬಗೆಹರಿಸಿ. ಬೆಂಗಳೂರಿನಲ್ಲಿ ಕಂಬಳ ಮಾಡಬೇಕು ಎಂದು ಮಂಗಳೂರಿನಿಂದ ಜನರು ಬಂದು ಉತ್ಸಾಹದಿಂದ ಇಲ್ಲಿ ಸೇರಿದ್ದಾರೆ. ಈ ಕಾರ್ಯಕ್ರಮಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಸ್ಥಳದಲ್ಲಿದ್ದ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಅವರಿಗೆ ತಿಳಿ ಹೇಳಿದರು.
ಕಾರ್ಯಕ್ರಮ ಮುಗಿಸಿ ಹೊರಟ ಶಿವಕುಮಾರ್ ಅವರ ಕಾಲಿಗೆ ಬಿದ್ದ ಮುನಿರತ್ನ ಕೊನೆಗೆ ಮನವಿ ಸಲ್ಲಿಸಿದರು. ಆಗ ಮಧ್ಯಾಹ್ನ ಮನೆಯ ಬಳಿ ಬನ್ನಿ, ಈ ಕುರಿತು ಚರ್ಚೆ ಮಾಡೋಣ ಎಂದು ಶಿವಕುಮಾರ್ ಸೂಚಿಸಿದರು.ಅದರಂತೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಧಾವಿಸಿದ ಮುನಿರತ್ನ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಡಿಸಿಎಂ ಅವರ ಬಳಿ ಚರ್ಚೆ ನಡೆಸಿದರು.
ವಶಕ್ಕೆ: ಇದಕ್ಕೂ ಮೊದಲು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ 25ಕ್ಕೂ ಹೆಚ್ಚು ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದರು. ಶಾಸಕ ಮುನಿರತ್ನ ಹೊರತುಪಡಿಸಿ ಉಳಿದ ಎಲ್ಲಾ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಏಕಾಂಗಿಯಾಗಿ ಶಾಸಕ ಮುನಿರತ್ನ ಪ್ರತಿಭಟನೆ ಮುಂದುವರಿಸಿದರು.
ಕಾಲಿಗೆ ಬೀಳಿಸಿಕೊಳ್ಳಲು ನಾನೇನು ಮಠದ ಸ್ವಾಮೀಜಿಯೇ:ಡಿಕೆಶಿ
ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಮುನಿರತ್ನ ಅವರು ನನ್ನ ಭೇಟಿಗೆ ಮೊದಲೇ ಅವಕಾಶ ಕೇಳಿದ್ದರೆ ಕೊಡುತ್ತಿದ್ದೆ. ನಾಟಕ ಮಾಡುವ ಅವಶ್ಯಕತೆ ಇರಲಿಲ್ಲ.ಅಲ್ಲದೆ, ಅವರನ್ನು ಕಾಲಿಗೆ ಬೀಳಿಸಿಕೊಳ್ಳಲು ನಾನೇನು ಮಠದ ಸ್ವಾಮೀಜಿಯೇ ಎಂದು ಪ್ರಶ್ನಿಸಿದರು.
ʼಶಾಸಕ ಮುನಿರತ್ನ ರಾಜರಾಜೇಶ್ವರಿ ಕ್ಷೇತ್ರಕ್ಕೆ ಅನುದಾನದ ವಿಚಾರವಾಗಿ ಚರ್ಚೆ ನಡೆಸಿ ದ್ವೇಷದ ರಾಜಕಾರಣ ಎಂದಿದ್ದಾರೆ. ಆದರೆ, ಬಿಜೆಪಿ ಸರಕಾರ ಇದ್ದ ವೇಳೆ ಕಾಂಗ್ರೆಸ್ ಶಾಸಕರ ಅನುದಾನಕ್ಕೆ ಏಕೆ ಕತ್ತರಿ ಹಾಕಿದ್ದರು? ಹೋಗಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನೆ ಕೇಳಿನೋಡಿ. ಕನಕಪುರಕ್ಕೆ ಬಂದಿದ್ದ ವೈದ್ಯಕೀಯ ಕಾಲೇಜನ್ನು ಹೇಗೆ ತೆಗೆದರು? ಅದನ್ನು ಯಾವ ರಾಜಕಾರಣ ಎಂದು ಕರೆಯುತ್ತಾರೆ ಎಂದು ಮುನಿರತ್ನ ಅವರಿಗೆ ಕೇಳಿದ್ದಾಗಿʼ ತಿಳಿಸಿದರು.
ಇದು ದ್ವೇಷದ ರಾಜಕಾರಣ:ಬಿಎಸ್ಸೈ
ಇದು ಮೇಲ್ನೋಟಕ್ಕೆ ದ್ವೇಷದ ರಾಜಕಾರಣ ಎಂದು ಗೊತ್ತಾಗಿದೆ. ಎಲ್ಲರಿಗೂ ಅನುದಾನ ಕೊಟ್ಟಂತೆ ಆರ್‍ಆರ್‍ನಗರಕ್ಕೂ ನೀಡಬೇಕು. ಅಲ್ಲದೆ, ಈ ರೀತಿ ಮಾಡುವುದು ಸರಿಯಲ್ಲ. ಒಬ್ಬರೇ ಧರಣಿ ಮಾಡೋದು ಬೇಡ, ಮುನಿರತ್ನ ಜೊತೆ ನಾವೆಲ್ಲರೂ ಇದ್ದೇವೆ. ಧರಣಿ ಕೈಬಿಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಅವಧಿಯಲ್ಲಿ ಹೊಸಕೆರೆಹಳ್ಳಿ ಕೆರೆಯನ್ನು ಉದ್ಯಾನವನ ಮಾಡಬೇಕೆಂದು, ಹೊಸಕೆರೆಹಳ್ಳಿ ರಸ್ತೆ ಅಭಿವೃದ್ಧಿಗೂ ಕೂಡ ಅನುದಾನ ನೀಡಿದ್ದರು. ಈ ಸಂಬಂಧ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಒಟ್ಟು 126 ಕೋಟಿ ರೂ., ಅನುದಾನ ರದ್ದಾಗಿದೆ. ಈ ಅನುದಾನವನ್ನು ಮೂರು ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಪುಲಕೇಶಿನಗರಕ್ಕೆ 40 ಕೋಟಿ, ಯಶವಂತಪುರ ಕ್ಷೇತ್ರಕ್ಕೆ 40 ಕೋಟಿ ರೂ., ಕೊಟ್ಟಿದ್ದಾರೆ. ಯಶವಂತಪುರ ಕ್ಷೇತ್ರಕ್ಕೆ 40 ಕೋಟಿ ರೂ., ಕೊಟ್ಟವರು ನನಗೂ ಕೂಡ ಕೊಡಬಹುದಿತ್ತು.
-ಮುನಿರತ್ನ, ಬಿಜೆಪಿ ಶಾಸಕ