ಅರಣ್ಯ ಒತ್ತುವರಿ | ಉಪಗ್ರಹ ಆಧಾರಿತ ಎಚ್ಚರಿಕೆ ವ್ಯವಸ್ಥೆ ರೂಪಿಸಲು ಈಶ್ವರ್ ಖಂಡ್ರೆ ಸೂಚನೆ

Update: 2024-06-27 11:26 GMT

ಬೆಂಗಳೂರು : ರಾಜ್ಯದ ಅರಣ್ಯ ಸಂಪತ್ತಿನ ಸಂರಕ್ಷಣೆ ಮತ್ತು ಅರಣ್ಯ ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಅಗತ್ಯವಿದ್ದು, ಉಪಗ್ರಹ ಆಧಾರಿತ ಎಚ್ಚರಿಕೆ ರವಾನೆ ವ್ಯವಸ್ಥೆ ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಅರಣ್ಯ ಭವನದಲ್ಲಿಂದು ಉನ್ನತಾಧಿಕಾರಿಗಳೊಂದಿಗೆ ನಡೆದ ಅರಣ್ಯ ಭೂಮಿ ಒತ್ತುವರಿ ತಡೆ ಮತ್ತು ವೃಕ್ಷ ಸಂರಕ್ಷಣೆ ಕುರಿತ ಮುಂದುವರಿದ ಸಭೆಯಲ್ಲಿ ಸಚಿವರು ಈ ಸೂಚನೆ ನೀಡಿದರು.

ಈಗಾಗಲೇ ಅಕ್ಷಾಂಶ ಮತ್ತು ರೇಖಾಂಶದ ಆಧಾರದ ಮೇಲೆ ಜಿಯೋ ರೆಫರೆನ್ಸ್ ಮೂಲಕ ರಾಜ್ಯದ ಅರಣ್ಯ ಪ್ರದೇಶದ ಗಡಿಗಳನ್ನು ಗುರುತಿಸಲಾಗಿದ್ದು, ಈ ದತ್ತಾಂಶವನ್ನು ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ (KSRSAC)ಗೆ ನೀಡಿ, ಮರಗಳ ಕಡಿತಲೆ ಮತ್ತು ಭೂ ಒತ್ತುವರಿಯ ಕುರಿತಂತೆ ಸಕಾಲಿಕ (ಕಾಲಕಾಲಕ್ಕೆ) ಎಚ್ಚರಿಕೆ ನೀಡುವ ವ್ಯವಸ್ಥೆಯೊಂದನ್ನು ಆದಷ್ಟು ಶೀಘ್ರ ರೂಪಿಸಲು ಪ್ರಸ್ತಾವನೆ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೆ ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (ಎನ್.ಆರ್.ಎಸ್.ಸಿ.)ಗೆ ಮಾಹಿತಿ ಬರುತ್ತದೆ. ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ (ಎನ್.ಆರ್.ಎಸ್.ಸಿ.)ಗೆ ಮಾಹಿತಿ ರವಾನೆ ಆಗಿ ತದನಂತರ ಸಂಬಂಧಿತ ಅರಣ್ಯ ವಲಯದ ಸಿಬ್ಬಂದಿಗೆ ಎಚ್ಚರಿಕೆ ಹೋಗಲು ಇರುವ ವ್ಯವಸ್ಥೆಯ ಮಾದರಿಯಲ್ಲಿಯೇ ಮರಗಳ ಅಕ್ರಮ ಕಡಿತಲೆ ಮತ್ತು ಅರಣ್ಯ ಭೂಮಿ ಒತ್ತುವರಿಗೂ ಒಂದು ಎಚ್ಚರಿಕೆ ರವಾನೆ ವ್ಯವಸ್ಥೆ ಕಲ್ಪಿಸಿ ಎಂದು ತಿಳಿಸಿದರು.

ವಲಯ ಮಟ್ಟದಲ್ಲಿ ದತ್ತಾಂಶ ಸಂಗ್ರಹಣೆಗೆ ಸೂಚನೆ:

ವಲಯ ಅರಣ್ಯಾಧಿಕಾರಿಗಳ ಮಟ್ಟದಲ್ಲಿ ಅರಣ್ಯ ಒತ್ತುವರಿಯ ಮತ್ತು ಅರಣ್ಯ ಹಕ್ಕು ಕಾಯಿದೆಯ ಅರ್ಜಿಗಳ ಕುರಿತಂತೆ ಸಂಪೂರ್ಣ ಮಾಹಿತಿಯ ದತ್ತಾಂಶವನ್ನು ಸಿದ್ಧಪಡಿಸಿ, ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸಕಾಲದಲ್ಲಿ ಆಕ್ಷೇಪಣೆ ಸಲ್ಲಿಸಿ ಇವುಗಳ ಇತ್ಯರ್ಥಕ್ಕೆ ಕ್ರಮವಹಿಸುವಂತೆ ಸೂಚಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಟ್ಟದಲ್ಲಿ ಬಾಕಿ ಇರುವ ಎಲ್ಲ 64ಎ ಪ್ರಕರಣಗಳನ್ನು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮುಂದಿರುವ ಮೇಲ್ಮನವಿಗಳನ್ನು ಕಾಲಮಿತಿಯಲ್ಲಿ ಅಂದರೆ ಒಂದು ವರ್ಷದೊಳಗೆ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News