ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಆಪ್ತನ ಕೊಲೆ ಯತ್ನ ಪ್ರಕರಣ: ಇನ್ಸ್ ಪೆಕ್ಟರ್ ಸೇರಿ 6 ಜನರ ಬಂಧನ
ಹಾಸನ : ಮಾಜಿ ಸಚಿವ ಎಚ್.ಡಿ.ರೇವಣ್ಣಅವರ ಆಪ್ತ, ಗುತ್ತಿಗೆದಾರ ಅಶ್ವಥ್ ಎಂಬವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಮೂಲದ ಐವರು ಮತ್ತು ಕೋಲಾರದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧಿಕಾರಿ ಸೇರಿ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಹಮ್ಮದ್ ಸುಜೀತಾ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಅಕ್ಟೋಬರ್ 10 ರಂದು ಮಾಜಿ ಸಚಿವ ರೇವಣ್ಣ ಅವರ ಹೊಳೆನರಸೀಪುರ ನಿವಾಸಕ್ಕೆ ತೆರಳಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವಥ್ ಅವರು ಮತ್ತೆ ತಮ್ಮ ನಿವಾಸಕ್ಕೆ ವಾಪಸ್ಸು ಹೋಗುವಾಗ ಅವರ ಕಾರಿಗೆ ದುಷ್ಕರ್ಮಿಗಳ ತಂಡವೊಂದು ಸೂರನಹಳ್ಳಿ ಗ್ರಾಮದ ಹಂಪ್ಸ್ ಬಳಿ ದಾಳಿ ನಡೆಸಿ, ಕೊಲೆ ಯತ್ನ ನಡೆಸಿತ್ತು. ಆದರೆ ಅವರು ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ್ದರು. ಈ ಬಗ್ಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ʼಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಲ್ಲಿ ಕೋಲಾರ ಎಸ್ಐಡಿ ವಿಭಾಗದ ಇನ್ಸ್‌ಪೆಕ್ಟರ್ ಅಶೋಕ್ ಸೇರಿ ಒಟ್ಟು ಆರು ಜನ ಆರೋಪಿಗಳನ್ನ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಳ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆʼ ಎಂದು ಎಸ್ಪಿ ಸುಜೀತಾ ಮಾಹಿತಿ ನೀಡಿದರು.
ಬೆಂಗಳೂರು ಮೂಲದ ಆರ್. ಸತೀಶ್ (38), ಚನ್ನರಾಯಪಟ್ಟಣದ ಬಿ.ಎಸ್. ತೇಜಸ್ವಿ (37), ಅರವಿಂದ್ (40), ಬೆಂಗಳೂರು ಮೂಲದ ಸಿ. ಮುರುಗನ್, ಆರ್. ಮಧುಸೂದನ್ (38 ) ಮತ್ತು ಕೋಲಾರ ಐಎಸ್ ಡಿ ಇನ್ಸ್‌ಪೆಕ್ಟರ್ ಜೆ. ಅಶೋಕ್ ಬಂಧಿತರು ಎಂದು ಅವರು ತಿಳಿಸಿದರು.
ʼಆರೋಪಿಗಳು ಈ ಹಿಂದೆ ಕೂಡ ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಆರೋಪಿಗಳಿಂದ ಒಂದು ಇನ್ನೋವಾ, ಒಂದು ಐ 10, ಒಂದು ಫೋರ್ಡ್ ಕಾರು ಮತ್ತು ಎಂಟು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಲಾರದ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಲೋಹಿತ್ ಹಾಗೂ ಪ್ರವೀಣ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರಕಿದೆʼ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ತಮ್ಮಯ್ಯ, ಡಿವೈಎಸ್ಪಿ ಡಿ. ಅಶೋಕ್, ಉಪವಿಭಾಗದ ಪಿ. ರವಿಪ್ರಸಾದ್ ಇತರರು ಉಪಸ್ಥಿತರಿದ್ದರು.