ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

Update: 2023-10-20 12:52 GMT

ಬೆಂಗಳೂರು, ಅ.20: ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಅವರ ಪತಿ ಟಿ.ಪಿ. ಶ್ರೀನಿವಾಸ್, ಬಿಬಿಎಂಪಿ ಮಾಜಿ ಸದಸ್ಯ ನರಸಿಂಹ ನಾಯ್ಕ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.

ಶುಕ್ರವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿಯ ಇಂದಿರಾ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರೋಬ್ಬರಿ 750ಕ್ಕೂ ಬಿಜೆಪಿ ನಾಯಕರನ್ನು ಬರಮಾಡಿಕೊಂಡರು.

ಸೇರ್ಪಡೆ ಕಾರ್ಯಕ್ರಮವನ್ನುದ್ದೆಶೀಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಾಜಿ ಶಾಸಕಿ ಪೂರ್ಣಿಮಾ ಮತ್ತು ಶ್ರೀನಿವಾಸ್ ಸಾಮಾಜಿಕ ನ್ಯಾಯದ ಪರವಾಗಿರುವವರು. ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿದ್ದರು. ಈಗ ಕಾಂಗ್ರೆಸ್‍ಗೆ ಬಂದಿದ್ದಾರೆ. ಇವರಿಗೆ ರಾಜಕೀಯವಾಗಿ ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಹೇಳಿದರು.

ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಪರವಾಗಿರುವ ಏಕೈಕ ರಾಷ್ಟ್ರೀಯ ಪಕ್ಷ ನಮ್ಮ ಕಾಂಗ್ರೆಸ್. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಿ ಎ.ಕೃಷ್ಣಪ್ಪ, ಪೂರ್ಣಿಮಾ ಮತ್ತು ಶ್ರೀನಿವಾಸ್ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಬಿಜೆಪಿ ಜಾತಿ ತಾರತಮ್ಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಎಲ್ಲ ಜಾತಿಯ ಬಡವರು ಮತ್ತು ಶೂದ್ರ ಸಮುದಾಯದವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ರಾಜಕೀಯ ನಿಲುವು ತೆಗೆದುಕೊಳ್ಳಬೇಕು ಎಂದರು.

ಪೂರ್ಣಿಮಾ, ಶ್ರೀನಿವಾಸ್ ಮತ್ತು ಇವರ ಬೆಂಬಲಿಗರಿಗೆ ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಇಲ್ಲ ಎನ್ನುವುದು ಸ್ಪಷ್ಟವಾಗಿ ಮನದಟ್ಟಾಗಿದೆ. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ನಿಲುವು ಇಟ್ಟುಕೊಂಡಿರುವವರಿಗೆ ಬಹಳ ಕಷ್ಟ ಎನ್ನುವುದು ಇವರನ್ನು ನೋಡಿದಾಗ ಸ್ಪಷ್ಟವಾಗಿದೆ. ಅದಕ್ಕೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಿಂದುಳಿದ ಸಮುದಾಯಗಳು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇಂದು ನನಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಹಳ ಸಂತೋಷದ ದಿನ. ನಾವು ಎ.ಕೃಷ್ಣಪ್ಪ ಅವರ ಜತೆಯಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ಒಟ್ಟಾಗಿ ರಾಜಕಾರಣ ಮಾಡಿದವರು. ವೀರಪ್ಪ ಮೊಯ್ಲಿ ಅವರು ಟಿಕೆಟ್ ನೀಡಿ ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದರು. ನಮ್ಮ ತಪ್ಪುಗಳಿಂದ ಅವರ ಜತೆಗಿನ ಕೊಂಡಿ ಕಳಚಿತ್ತು. ಕೃಷ್ಣಪ್ಪ ಅವರ ಪುತ್ರಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಮೂಲಕ ಇಂದು ಮತ್ತೆ ಆ ಕೊಂಡಿ ಬೆಸೆದುಕೊಂಡಿದೆ ಎಂದು ನುಡಿದರು.

ಇಂದು ಕೇವಲ ಪೂರ್ಣಿಮಾ ಅವರು ಹಾಗೂ ಶ್ರೀನಿವಾಸ್ ಇವರಿಬ್ಬರು ಮಾತ್ರ ಪಕ್ಷ ಸೇರುತ್ತಿಲ್ಲ. ಕರ್ನಾಟಕ ರಾಜ್ಯದ ಪ್ರವರ್ಗ 1ರ ಜಾತಿಯ ಒಕ್ಕೂಟ, ಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘ ಸೇರಿದಂತೆ ಅನೇಕ ಸಂಘಟನೆಗಳ 4-5 ಸಾವಿರ ಕಾರ್ಯಕರ್ತರು ಪಕ್ಷ ಸೇರುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸಚಿವ ಡಿ.ಸುಧಾಕರ್, ರಾಜ್ಯ ಸರಕಾರದ ಹೊಸದಿಲ್ಲಿ ಪ್ರತಿನಿಧಿ ಟಿ.ಬಿ.ಜಯಚಂದ, ಪರಿಷತ್ ಸದಸ್ಯ ನಾಗರಾಜ ಯಾದವ್ ಸೇರಿದಂತೆ ಪ್ರಮುಖರಿದ್ದರು.

ನನ್ನಲ್ಲಿ ಕಾಂಗ್ರೆಸ್ ರಕ್ತವಿದೆ: ‘ನಮ್ಮ ಕುಟುಂಬವನ್ನು ಎ.ಕೃಷ್ಣಪ್ಪ ಅವರ ಕುಟುಂಬ ಎಂದೇ ಗುರುತಿಸಲಾಗುತ್ತಿದೆ. ಕಾಂಗ್ರೆಸ್‍ನ ಕೃಷ್ಣಪ್ಪ ಎಂದೇ ಗುರುತಿಸುತ್ತಿದ್ದರು. ಕಾರಣಾಂತರದಿಂದ ನಮ್ಮ ತಂದೆ ಕಾಂಗ್ರೆಸ್ ಪಕ್ಷವನ್ನು ಬಿಡಬೇಕಾಯಿತು. ಈಗ ತಂದೆ ಅವರ ಇಚ್ಚೆಯಂತೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಸಿದ್ದಾಂತ ಒಪ್ಪಿ ಬಂದಿದ್ದೇನೆ. ಕಾಂಗ್ರೆಸ್ ರಕ್ತ ನನ್ನಲ್ಲಿದೆ ಎಂದು ಹಲವರು ಹೇಳಿದ್ದರು. ಈಗ ಅದೇ ರಕ್ತ ನನ್ನನ್ನು ಕಾಂಗ್ರೆಸ್‍ಗೆ ಸೆಳೆದು ತಂದಿದೆ. ಮತ್ತೊಂದು ಪಯಣ ಕಾಂಗ್ರೆಸ್‍ನಲ್ಲಿ ಆರಂಭವಾಗಿದೆ’ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News