ಭಾಷೆಗಳನ್ನು ಉಳಿಸಿ-ಬೆಳೆಸಲು ಭಾಷಾ ನೀತಿ ರೂಪಿಸಲಿ: ಪುರುಷೋತ್ತಮ ಬಿಳಿಮಲೆ

Update: 2023-07-08 17:39 GMT

ಬೆಂಗಳೂರು, ಜು.8: ರಾಜ್ಯದಲ್ಲಿ ಭಾಷಾ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಒಂದು ಸರ್ವೇ, ಒಂದು ಭಾಷಾ ನೀತಿ ಹಾಗೂ ಮುಂದಿನ ಐದು ವರ್ಷಗಳಲ್ಲಿ ಭಾಷೆಗಳು ಉಳಿದು ಬೆಳೆಯುವಂತೆ ಮಾಡಲು ಯೋಜನೆಗಳನ್ನು ರೂಪಿಸಬೇಕು ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಶನಿವಾರ ವಸಂತನಗರದ ದೇವರಾಜ ಅರಸು ಭವನದಲ್ಲಿ ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ವತಿಯಿಂದ ನಡೆದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಹಾಗೂ ಸಾಹಿತ್ಯ ಆತಂಕದಲ್ಲಿದ್ದು, ಈ ಆತಂಕವನ್ನು ಹೋಗಲಾಡಿಸಲು ಸರಕಾರ ಅತ್ಯುನ್ನತ ಯೋಜನೆಗಳನ್ನು ಜಾರಿಗೆ ತರಬೇಕಿದೆ ಎಂದರು.

ಈ ಹಿಂದಿನ ಸರಕಾರ ಹಿಂದಿ ಮತ್ತು ಸಂಸ್ಕøತ ಪರವಾಗಿತ್ತು. ಆದ್ದರಿಂದ ಈಗಿರುವ ಕಾಂಗ್ರೆಸ್ ಸರಕಾರವಾದರೂ ಕನ್ನಡಕ್ಕಿರುವ ಆತಂಕವನ್ನು ತೊಡೆದು ಹಾಕಬೇಕು. ರಾಜ್ಯದಲ್ಲಿ ಬುಗಿಲೆದ್ದಿರುವ ಭಾಷೆಯ, ಶಿಕ್ಷಣ ಸಂಸ್ಥೆಗಳ, ನಾಡಿನ, ಮಣ್ಣಿನ, ನೀರಿನ, ಜಾತ್ರೆಗಳ, ಅನ್ನದ ಕೋಮುವಾದೀಕರಣಗಳ ವಿರುದ್ಧ ಜನತೆ ಯುದ್ಧ ಸಾರದಿದ್ದರೆ ಈ ರಾಜ್ಯ ಉಳಿಯುವುದಿಲ್ಲ. ಇದರ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕು ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಹೇಗೆಯೋ ಸರ್ವ ಭಾಷೆಗಳ ಶಾಂತಿಯ ತೋಟವೂ ಆಗಿದೆ. ರಾಜ್ಯದ ಭೂಗೋಳಿಕ, ರಾಜಕೀಯ ಸ್ಥಿತಿಯನ್ನು ನೋಡಿದರೆ ಮರಾಠಿಗರು, ತೆಲುಗು, ತಮಿಳರು, ಉರ್ದು, ಮಲೆಯಾಳಿಗಳು ಹೀಗೆ ಅನೇಕ ಭಾಷೆಗಳಿಂದ ಸುತ್ತುವರಿದ ಕರ್ನಾಟಕ, ಅನೇಕ ಭಾಷೆಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ನಾವು ಕನ್ನಡವನ್ನು ಬೆಳೆಸುವುದರ ಜೊತೆಗೆ ಕನ್ನಡೇತರ ಭಾಷೆಗಳನ್ನೂ ಬೆಳೆಸಿ, ಉಳಿಸಿ ಕರ್ನಾಟಕದ ಬಹುತ್ವವನ್ನು ರಕ್ಷಿಸುವುದು ಹೇಗೆ ಎಂಬುದರ ಕುರಿತು ಸರಕಾರ ಯೋಚಿಸಬೇಕು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ದು.ಸರಸ್ವತಿ ಮಾತನಾಡಿ, ‘ಇಂದು ಮಹಿಳೆಯರು ಪುರುಷರ ಸಮನಾಗಿ ದುಡಿಯುತ್ತಿದ್ದಾರೆ. ಆದರೆ, ಸಮಾಜ ಮಹಿಳೆಯರು ಮನೆಯಲ್ಲಿ ದುಡಿಯುವುದರನ್ನು ದುಡಿತವೆಂದು ಪರಿಗಣಿಸುವುದಿಲ್ಲ, ವಾಸ್ತವದಲ್ಲಿ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ದುಡಿಯುತ್ತಾರೆ’ ಎಂದು ತಿಳಿಸಿದರು.

ಜಾಡ ಮಾಲಿಗಳು ಮಲ ಹೊರುವುದು, ಚರಂಡಿಗೆ ಇಳಿಯುವುದನ್ನೆಲ್ಲ ಕಾನೂನಿನಲ್ಲಿ ನಿಷೇಧಿಸಲಾಗಿದೆ. ಆದರೆ, ಇದು ವಿಧಾನಸೌಧ ಎದುರುಗಡೆಯೇ ಪಾಲನೆಯಾಗದಿರುವುದು ದುರಂತ. ಇನ್ನು ಇತರೆ ಜಾತಿಗಳಿಗೆ ಹೋಲಿಸಿದರೆ ಭೂಮಿ ಹಂಚಿಕೆಯಲ್ಲಿ ದಲಿತರ ತಾರತಮ್ಯವಾಗಿದೆ ಸರಕಾರ ಇದೆಲ್ಲವನ್ನೂ ಗಂಭೀತವಾಗಿ ಪರಿಗಣಿಸಿ ಪರಿಹರಿಸಬೇಕು ಎಂದು ದು.ಸರಸ್ವತಿ ತಿಳಿಸಿದರು.

ಲೇಖಕ ಡಾ.ಟಿ.ಆರ್.ಚಂದ್ರಶೇಖರ್ ಮಾತನಾಡಿ, ‘ದುಡಿಮೆಯ ಹಕ್ಕು ಮೂಲಭೂತ ಹಕ್ಕಾದರೆ ಮಾತ್ರ ದೇಶದಲ್ಲಿರುವ ನಿರುದ್ಯೋಗವನ್ನು ಬುಡಮೇಲು ಮಾಡಲು ಸಾಧ್ಯ. ಇಂದು ದೇಶದಲ್ಲಿ ಹೆಚ್ಚಿನ ಯುವಜನತೆ ನಿರುದ್ಯೋಗವನ್ನು ಎದುರಿಸುತ್ತಿದ್ದು, ದುಡಿಮೆ ಅಥವಾ ಉದ್ಯೋಗದ ಹಕ್ಕು ಮೂಲಭೂತ ಹಕ್ಕನ್ನಾಗಿ ರೂಪಿಸಿದರೆ ಇದಕ್ಕೆ ಪರಿಹಾರ ಸಿಗಲಿದೆ’ ಎಂದರು.

ಶಿಕ್ಷಣತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ‘ಶಿಕ್ಷಣದ ಹಕ್ಕು ಪರಿಣಾಮಕಾರಿಯಾದರೆ ನಿರುದ್ಯೋಗ ನಿವಾರಣೆಯಾಗುತ್ತದೆ. ಸರಕಾರ ಖಾಸಗಿ ಶಾಲೆಗಳ ನಿಯಂತ್ರಣ ಮಾಡಿ, ನಮ್ಮ ಪ್ರಾಥಮಿಕ ಶಿಕ್ಷಣವನ್ನು ಬಲಿಷ್ಠಗೊಳಿಸಬೇಕು ಎಂದ ಅವರು, ಉನ್ನತ ಶಿಕ್ಷಣಕ್ಕೆ ಶೇ.18ರಷ್ಟು ಮೀಸಲಾತಿ ಇದ್ದು, ಖಾಸಗಿ ಶಾಲೆಗಳ ಶಿಕ್ಷಣದಲ್ಲಿ ಮೀಸಲಾತಿ ಏಕಿಲ್ಲ’ ಎಂದು ಪ್ರಶ್ನಿಸಿದರು. ಹಿರಿಯ ಸಾಹಿತಿ ಗೊರೂರು ಚನ್ನಬಸಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ, ಕವಯಿತ್ರಿ ಪ್ರಭಾ ಸೇರಿದಂತೆ ಹಲವರು ಇದ್ದರು.

‘ವಿವಿಗಳ ಸಿಂಡಿಕೇಟ್ ಮತ್ತು ಸೆನೆಟ್‍ಗಳಲ್ಲಿ ಕೆಲಸ ಮಾಡಬೇಕಾದವರು ಶಿಕ್ಷಣ ತಜ್ಞರೇ ಹೊರತು ರಾಜಕಾರಣಿಗಳಲ್ಲ, ಆದುದರಿಂದ ಸರಕಾರವು ವಿವಿಗಳ ಸಿಂಡಿಕೇಟ್ ಮತ್ತು ಸೆನೆಟ್‍ಗಳಿಗೆ ಸರಿಯಾದ ವ್ಯಕ್ತಿಗಳನ್ನು ನೇಮಿಸಬೇಕು’

-ಪುರುಷೋತ್ತಮ ಬಿಳಿಮಲೆ, ಲೇಖಕ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News