ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಮೋಹನ್ ನಾಯಕ್‍ಗೆ ಹೈಕೋರ್ಟ್‍ನಿಂದ ಜಾಮೀನು

Update: 2023-12-08 12:58 GMT

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಮೋಹನ್ ನಾಯಕ್‍ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಹತ್ಯೆ ಮಾಡಿದ ಆರೋಪಿಗಳಿಗೆ ಆಶ್ರಯ ನೀಡಿದ ಹಾಗೂ ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮೋಹನ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(ಕೋಕಾ)ಯಡಿ ವಿಚಾರಣೆ ನಡೆಯುತ್ತಿದೆ.

ಪ್ರಕರಣ ಸಂಬಂಧ ಅಮೋಲ್ ಕಾಳೆ, ಅಮಿತ್ ಬದ್ದಿ, ಪರಶುರಾಮ್ ವಾಘ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ದೆಗ್ವೇಕರ್, ಭರತ್ ಕುರಾಣೆ, ರಾಜೇಶ್ ಡಿ. ಬಂಗೇರ, ಸುಧನ್ವ ಗೊಂದಲೇಕರ್, ಮೋಹನ್ ನಾಯಕ್ ಎನ್, ಸುರೇಶ್ ಎಚ್.ಎಲ್., ಶರದ್ ಬಿ.ಕಲಸ್ಕರ್, ವಾಸುದೇವ್ ಬಿ. ಸೂರ್ಯವಂಶಿ, ಸುಜಿತ್ಕುಮಾರ್, ಮನೋಹರ ಯಡವೆ, ಶ್ರೀಕಾಂತ ಜೆ.ಪಗಾರಕರ್, ಕೆ.ಟಿ. ನವೀನ್ ಕುಮಾರ್ ಮತ್ತು ಋಷಿಕೇಶ್ ದೇವಡೇಕರ್ ಎಂಬುವವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿದ್ದಾರೆ.

ಕೋಕಾ ಕಾಯ್ದೆ ಎತ್ತಿ ಹಿಡಿದಿದ್ದ ಸುಪ್ರೀಂ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೋಹನ್ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(ಕೋಕಾ)ಯಡಿ ದಾಖಲಿಸಲಾದ ಆರೋಪ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಗೌರಿ ಸಹೋದರಿ ಕವಿತಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ್ದ  ಸುಪ್ರೀಂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಪೀಠವು, 2021ರ ಅಕ್ಟೋಬರ್ ನಲ್ಲಿ ಆದೇಶ ನೀಡಿದ್ದು, ಮೋಹನ್ ನಾಯಕ್ ವಿರುದ್ಧ ಕೋಕಾ ಕಾಯ್ದೆಯನ್ನು ಮರು ಸ್ಥಾಪಿಸುವಂತೆ ಸೂಚನೆ ನೀಡಿತ್ತು.

ಕೋಕಾ ಕಾಯ್ದೆಯಡಿ ಬಂಧಿತನಾಗಿದ್ದ ಮೋಹನ್ ನಾಯಕ್‍ಗೆ ವಿಚಾರಣೆ ಮುಗಿಯುವವರೆಗೂ ಜಾಮೀನು ಪಡೆಯುವುದು ಕಷ್ಟವಾಗಲಿದೆ ಎನ್ನಲಾಗಿತ್ತು. 2018ರಲ್ಲಿ ಈತನ ವಿರುದ್ಧ ಕೋಕಾ ಕಾಯ್ದೆ ರದ್ದುಗೊಳಿಸಿದ ಬೆನ್ನಲ್ಲೇ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಇತ್ಯರ್ಥಪಡಿಸುವವರೆಗೂ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿತ್ತು. ಇದೀಗ ಮೋಹನ್ ಕೋಕಾ ಕಾಯ್ದೆಯಡಿ ಬಂಧಿತನಾಗಿದ್ದರೂ ಜಾಮೀನು ಲಭಿಸಿರುವುದು ಆಶ್ಚರ್ಯ ಮೂಡಿಸಿದೆ.

ಪ್ರಮುಖ ಆರೋಪಿ ಅಮೋಲ್ ಕಾಳೆ ನೇತೃತ್ವದಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ಸಂಚಿನಲ್ಲಿ ಮೋಹನ್ ನಾಯಕ್ ಭಾಗಿಯಾಗಿದ್ದ. ಆರೋಪಿ ಕಾಳೆ, ಗೌರಿ ಅವರಲ್ಲದೆ ಇನ್ನೂ ಅನೇಕ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎನ್ನುವುದು ಎಸ್‍ಐಟಿ ತನಿಖೆಯಿಂದ ಬಹಿರಂಗವಾಗಿದೆ ಎಂದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News