ಮೈಕ್ರೋ ಫೈನಾನ್ಸ್‌ಗಳಿಗೆ ಧಾರಾಳವಾಗಿ ಅವಕಾಶ ಕೊಟ್ಟ ಸರಕಾರ : ಎಚ್‌ಡಿಕೆ ಆಕ್ರೋಶ

ಎಚ್.ಡಿ.ಕುಮಾರಸ್ವಾಮಿ
ಮೈಸೂರು: ಮಹಿಳೆಯರಿಗೆ 2000 ಗೃಹಲಕ್ಷ್ಮಿ ಹಣ ಕೊಟ್ಟು ಸಬಲೀಕರಣ ಮಾಡುತ್ತೇವೆ ಎನ್ನುವ ರಾಜ್ಯ ಸರಕಾರ, ಇನ್ನೊಂದು ಕಡೆ ಅದೇ ಮಹಿಳೆಯರ ಜೀವ ಹರಣ ಮಾಡಲು ಮೈಕ್ರೋ ಫೈನಾನ್ಸ್ ಗಳಿಗೆ ಧಾರಾಳವಾಗಿ ಅವಕಾಶ ಕೊಟ್ಟಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.
ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಒಂದು ತಿಂಗಳ ಹಿಂದೆಯೇ ಚಾಮರಾಜನಗರದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಶುರುವಾಯಿತು. ಜನರು ಊರೇ ಬಿಟ್ಟು ಹೋದರು. ಸಮಸ್ಯೆ ಶುರುವಾಗಿ ಇಷ್ಟು ದಿನವಾದರೂ ಈಗ ಇವರು ನಾಳೆ ಸಭೆ ಕರೆದಿದ್ದಾರೆ. ಇಷ್ಟೆಲ್ಲಾ ಹಾವಳಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದರೂ ಸರಕಾರ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಿಲ್ಲ.. ಯಾಕೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ರೈತ ಮಹಿಳೆಯರು ಮತ್ತು ಬಡ ಮಹಿಳೆಯರೇ ಹೆಚ್ಚಾಗಿ ಮೈಕ್ರೋ ಫೈನಾನ್ಸ್ ಗಳಿಗೆ ಗುರಿಯಾಗುತ್ತಿದ್ದಾರೆ. ಇವರೆಲ್ಲರೂ ತಮ್ಮ ಮನೆ ಊರುಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಇದಕ್ಕೆ ಯಾರು ಕಾರಣ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು
ಮೈಕ್ರೋ ಫೈನಾನ್ಸ್ ಕಂಪನಿಗಳು ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. ಕಾನೂನುಬಾಹಿರವಾಗಿ ಚಟುವಟಿಕೆಗಳನ್ನು ನಡೆಸುತ್ತಿವೆ. ಕಾನೂನು ನಿಯಂತ್ರಣ ಇಲ್ಲ. 2018ರಲ್ಲಿ ನಾನು ಕಾಂಗ್ರೆಸ್ ಪಕ್ಷದ ಜತೆ ಸೇರಿ ಸರಕಾರ ಮಾಡಿದ್ದೆ. ಋಣ ಮುಕ್ತ ಕಾಯ್ದೆಯನ್ನು ಜಾರಿಗೆ ತಂದಿದ್ದೆ. ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆಯೇ ಅಂಗೀಕಾರವಾಗಿದೆ. ರಾಜ್ಯಪಾಲರು ಒಪ್ಪಿಗೆ ಕೊಟ್ಟ ಮೇಲೆ ನಾನೇ ಸ್ವತಃ ದೆಹಲಿಗೆ ಹೋಗಿ ರಾಷ್ಟ್ರಪತಿಗಳ ಅಂಕಿತ ಹಾಕಿಸಿಕೊಂಡು ಬಂದೆ. ನಂತರ ಬಂದ ಸರಕಾರಗಳು ಆ ಕಾಯ್ದೆಯನ್ನು ಏನು ಮಾಡಿದವು? ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ 60 ಮೈಕ್ರೋ ಫೈನಾನ್ಸ್ :
ಸಿಎಂ ಅವರು ನಾಳೆ ಸಭೆ ಕರೆದಿದ್ದಾರೆ. ಸಭೆ ಕರೆದು ಏನು ಮಾಡುತ್ತೀರಿ? ಎಷ್ಟು ಜನ ಜೀವ ಕಳೆದುಕೊಂಡಿದ್ದಾರೆ? ಎಷ್ಟು ಜನರು ಮನೆ ಊರು ಬಿಟ್ಟು ಹೋಗಿದ್ದಾರೆ. ಅವರಿಗೆಲ್ಲ ಏನು ಪರಿಹಾರ? ಅಧಿಕಾರಿಗಳ ಕೈಯ್ಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಾನು ಮಂಡ್ಯ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದೆ. ಈ ಜಿಲ್ಲೆ ಒಂದರಲ್ಲಿಯೇ 60 ಮೈಕ್ರೋ ಫೈನಾನ್ಸ್ ಗಳಿವೆ. ಅದರಲ್ಲಿ 14-15 ಫೈನಾನ್ಸ್ ಗಳು ಪರವಾನಗಿ ಪಡೆದಿವೆ. ಉಳಿದವು ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುತ್ತಾ ಜನರಿಗೆ ತೊಂದರೆ ಕೊಡುತ್ತಿವೆ ಎಂದು ಸಚಿವರು ಹೇಳಿದರು.
ವಿಪಕ್ಷಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ :
ರಾಜ್ಯಕ್ಕೆ ಒಳ್ಳೆಯದು ಮಾಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟರು. ಆದರೆ, ಅವರು ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ತಿಕ್ಕಾಟ ನಡೆಯುತ್ತಿದೆ. ಅಧಿಕಾರಕ್ಕಾಗಿ ಕಚ್ಚಾಟ ನಡೆಯುತ್ತಿದೆ. ಆದರೂ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಿ ಜನರ ಗಮನ ಬೇರೆಡೆಗೆ ಸೆಳೆಯುವ ಕೆಲಸ ಮಾಡಲಾಗುತ್ತಿದೆ. ನಾವು ಒಂದಾಗಿದ್ದೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಇವರು ಒಂದಾಗಿರುವುದು ಕೇವಲ ಅಧಿಕಾರಕ್ಕಾಗಿ ಮಾತ್ರ ಎಂದರು.