ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ʼಗ್ಯಾರೆಂಟಿʼ ಕೊಡಿ : ಆರ್.ಅಶೋಕ್ ಆಗ್ರಹ

Update: 2024-02-24 13:04 GMT

ಬೆಂಗಳೂರು : ಇನ್ನೂ ಬೇಸಿಗೆ ಕಾಲವೇ ಆರಂಭವಾಗಿಲ್ಲ. ಆದರೆ, ಈಗಾಗಲೇ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಮ್ಮ ‘ಇಂಡಿಯಾ’ ಮೈತ್ರಿಕೂಟದ ಡಿಎಂಕೆ ಪಕ್ಷದ ಜೊತೆ ದೋಸ್ತಿ ಉಳಿಸಿಕೊಳ್ಳಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ಕಾವೇರಿ ನೀರನ್ನ ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿದ ನಾಡದ್ರೋಹಿ ಕಾಂಗ್ರೆಸ್ ಸರಕಾರ ಈಗ ಬೆಂಗಳೂರಿನ ಜನತೆ ಖಾಸಗಿ ಟ್ಯಾಂಕರ್ ಗಳಿಗೆ ಸಾವಿರಾರು ರೂ.‌ ತೆರುವ ಸ್ಥಿತಿ ತಂದಿಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಶನಿವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ಬರ ಸ್ಥಿತಿಯಿಂದ ಬೆಂಗಳೂರು ನಗರದಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ಮೊದಲೇ ಅಂದಾಜಿಸಿ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಲು, ಹಳೇ ಕೊಳವೆ ಬಾವಿಗಳ ಮರುಪೂರಣ ಮಾಡಲು, ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕಲು ಕ್ರಮ ಕೈಗೊಂಡಿದ್ದರೆ ಇವತ್ತು ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಾಯಿಮಾತಿಗೆ ಘೋಷಣೆ ಮಾಡಿ ಆಡಳಿತದ ಚುಕ್ಕಾಣಿಯನ್ನು ಸಂಪೂರ್ಣವಾಗಿ ಅಧಿಕಾರಿಗಳಿಗೆ ಕೊಟ್ಟು ಕಾಂಗ್ರೆಸ್ ನಾಯಕರು ಸದಾ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಪಕ್ಕದ ರಾಜ್ಯಗಳ ಚುನಾವಣೆ ಉಸಾಬರಿ ನೋಡಿಕೊಳ್ಳಲು ಕಾಲಹರಣ ಮಾಡುತ್ತಾ ಬೆಂಗಳೂರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ ಪರಿಣಾಮ ಇವತ್ತು ಬೆಂಗಳೂರಿನ ಜನರು ಹನಿ ನೀರಿಗೂ ಪರದಾಡುವ ದುಸ್ಥಿತಿ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ರಾಜಕಾರಣ ಬಿಟ್ಟು ಜನಕಾರಣದತ್ತ ಗಮನ ಹರಿಸಿ ಜನತೆಗೆ ಕನಿಷ್ಠ ಪಕ್ಷ ಕುಡಿಯುವ ನೀರಿನ ಗ್ಯಾರೆಂಟಿಯಾದರೂ ಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News