ಧ್ವನಿ ಇಲ್ಲದವರಿಗೆ ದ್ವನಿಯಾಗುವುದು ಪತ್ರಿಕಾ ವೃತ್ತಿಯ ಮೂಲಭೂತ ಮೌಲ್ಯ: ಸಿಎಂ ಸಿದ್ದರಾಮಯ್ಯ

Update: 2023-12-31 13:15 GMT

Photo: X/@CMofKarnataka

ಬೆಂಗಳೂರು: ‘ಅವಕಾಶ ವಂಚಿತರ ಪರವಾಗಿ, ಧ್ವನಿ ಇಲ್ಲದವರಿಗೆ ದ್ವನಿಯಾಗುವುದು, ವಸ್ತುನಿಷ್ಠವಾಗಿ ಸುದ್ದಿಗಳನ್ನು ವರದಿ ಮಾಡುವುದು ಪತ್ರಿಕಾ ವೃತ್ತಿಯ ಮೂಲಭೂತ ಮೌಲ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನವೇ ನಮ್ಮ ಧರ್ಮ. ರಾಜಕೀಯ ಧರ್ಮ ಅನುಸರಿಸುವುದೇ ಸಂವಿಧಾನಕ್ಕೆ ಕೊಡುವ ಗೌರವವಾಗಿದೆ. ಸುದೀರ್ಘ ಚರ್ಚೆಯ ಬಳಿಕ ನಮ್ಮ ಸಂವಿಧಾನ ಜಾರಿಯಾಗಿದ್ದು, ಅದನ್ನು ಗೌರವಿಸುವುದು, ಪಾಲಿಸುವುದು ಎಲ್ಲ ರಾಜಕೀಯ ಪಕ್ಷಗಳ, ವ್ಯಕ್ತಿಗಳ ಕರ್ತವ್ಯ ಎಂದರು.

ಪತ್ರಿಕಾ ವೃತ್ತಿಯ ಮೂಲಭೂತ ಮೌಲ್ಯಗಳನ್ನು ಪಾಲಿಸುವುದೇ ಸಂವಿಧಾನಕ್ಕೆ ಕೊಡುವ ಗೌರವ. ಇದನ್ನು ಬಿಟ್ಟು ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನು ದೊಡ್ಡ ಚರ್ಚೆ ಮಾಡಿ ಮೌಢ್ಯ ಬೆಳೆಸಿದಂತಹ ರೀತಿಯಲ್ಲಿ ಕೆಲಸ ಮಾಡಬೇಡಿ ಎಂದು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಯಾವುದೇ ಸರಕಾರ ತಪ್ಪು ಮಾಡಿದರೂ ಅದನ್ನು ಹೇಳುವ ಧೈರ್ಯ ಪತ್ರಕರ್ತರಿಗೆ ಇರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಅಭಿವೃದ್ಧಿಯ ಚರ್ಚೆ ಮತ್ತು ಕನಸು ಇತ್ತು. ಈಗ ಮಾಧ್ಯಮ ಉದ್ಯಮಿಗಳ ಕೈಗೆ ಸಿಕ್ಕಿಹಾಕಿ ಕೊಂಡಿದೆ. ಉದ್ಯಮಿಗಳಿಗೆ ಸಮಾಜಮುಖಿಯಾದ ಯಾವ ಕಾಳಜಿಗಳೂ ಇರುವುದಿಲ್ಲ. ಈ ಬಗ್ಗೆ ಪತ್ರಕರ್ತ ಸಮೂಹ ಎಚ್ಚರ ವಹಿಸಬೇಕು ಎಂದು ಅವರು ನುಡಿದರು.

ನನ್ನನ್ನು ಜೆಡಿಎಸ್ ಪಕ್ಷದಿಂದ  ಉಚ್ಛಾಟನೆ ಮಾಡಿದರೇ ಹೊರತು ನಾನು ಜೆಡಿಎಸ್ ಬಿಡಲಿಲ್ಲ. ಹೀಗಾಗಿ ವರದಿ, ವಿಶ್ಲೇಷಣೆ ಮಾಡುವಾಗ ನಾನು ಜೆಡಿಎಸ್ ಪಕ್ಷ ತೊರೆದೆ ಎಂದು ಬರೆಯುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ವರ್ಷದ ವ್ಯಕ್ತಿ ಪ್ರಶಸ್ತಿ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಪ್ರೆಸ್‍ಕ್ಲಬ್ ವಿಶೇಷ ಪ್ರಶಸ್ತಿ, ಕಾರ್ಮಿಕ ಸಚಿವ ಸಂತೋ‌ಷ್ ಲಾಡ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರಿಗೆ ಪ್ರೆಸ್‍ಕ್ಲಬ್ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ 2024ರ ಪ್ರೆಸ್ ಕ್ಲಬ್ ಡೈರಿಯನ್ನು ಬಿಡುಗಡೆ ಮಾಡಲಾಯಿತು.

ಸುಪ್ರೀಂ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಉಪ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ತ್ಯಾಗರಾಜ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News