ಶರಾವತಿ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ಸರಕಾರ ಬದ್ಧ: ಸಚಿವ ಮಧು ಬಂಗಾರಪ್ಪ

Update: 2023-10-22 17:01 GMT

ಶಿವಮೊಗ್ಗ: ಶರಾವತಿ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ಸರಕಾರ ಬದ್ಧವಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ಕೇಂದ್ರ ಸರಕಾರ ಹಾಗೂ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಈ ಜನರಿಗೆ ನ್ಯಾಯ ಒದಗಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಲವು ಜಲವಿದ್ಯುತ್ ಯೋಜನೆಗಳಿಂದ ಮಲೆನಾಡಿನಲ್ಲಿ ಭೂಮಿಯ ಸಮಸ್ಯೆ ಇದೆ.ಬಗರ್‌ಹುಕುಂ ಸಾಗುವಳಿದಾರರಿಗೆ ಕಾನೂನು ವ್ಯಾಪ್ತಿಯಲ್ಲಿ ಹಕ್ಕುಪತ್ರಕೊಡುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಹೇಳಿದರು.

ಶಿವಮೊಗ್ಗ ದಸರಾ ಅನುದಾನ ಕುರಿತು ಪ್ರತಿಕ್ರಿಯಿಸಿದ ಅವರು, ಬರದಿಂದ ಅನುದಾನ ಕಡಿತವಾಗಿದೆ.ಈ ಬಾರಿಯ ದಸರವನ್ನ ನಾವುಗಳೇ ದುಡ್ಡು ಹಾಕಿಕೊಂಡು ಮಾಡಬೇಕಿದೆ.ಬರಗಾಲ ಬಂದಿರುವುದರಿಂದ ದಸರಾ ಮಾಡುವುದು ಕಷ್ಟವಾಗುತ್ತದೆ.ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಮನವಿ ಮಾಡಿದ್ದರು ಅದು ನನಗೆ ಸರಿ ಅನಿಸುತ್ತಿದೆ.ಯಾವಾಗಲೂ ಹಬ್ಬವನ್ನು ಹೃದಯದಿಂದಲೇ ಮಾಡಬಹುದು ಖರ್ಚು ಮಾಡಿಯೇ ಹಬ್ಬ ನಡೆಸಬೇಕೆಂದಿಲ್ಲ. ನಾವೆಲ್ಲರೂ ಸೇರಿ ಒಂದಾಗಿ ಮಾಡಬಹುದು. ಖರ್ಚು ಮಾಡಿ ಹಬ್ಬ ಮಾಡುವುದು ಬೇಡ ಸರ್ಕಾರದ ಹಣ ವ್ಯರ್ಥವಾಗುವುದು ಬೇಡ ಎಂಬುದು ಅವರ ಅಭಿಪ್ರಾಯ.ರಾಜ್ಯ ಸುಭೀಕ್ಷವಾಗಿದ್ದಾಗ ಜೇಬು ತುಂಬಿದಾಗ ಹಬ್ಬಗಳನ್ನು ಮಾಡುವುದು ಸರಿ ಎಂದರು.

ಸರ್ಕಾರದ ಅನುದಾನದ ಕೊರತೆಗೆ ಈಶ್ವರಪ್ಪನವರ ಹೇಳಿಕೆ ವಿಚಾರಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನವರು ಜಟಕಾ ಗಾಡಿಯಲ್ಲಿ ಓಡಾಡುತ್ತಿದ್ದರಾ.ಬಿಜೆಪಿ ಸಚಿವರು ಜಟಕಾ ಗಾಡಿಯಲ್ಲಿ ಹೋಗಿದ್ರಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ವಿದ್ಯುತ್ ಅಭಾವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿದ್ಯುತ್ ಅಭಾವದ ಕೊರತೆ ಇದೆ.ಈ ಕುರಿತು ಅ.26ನೇ ತಾರೀಖಿನಂದು ಸಚಿವ ಕೆ ಜೆ ಚಾರ್ಜ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮುಖ್ಯಮಂತ್ರಿಗಳು ಕೂಡ ಸೂಚನೆ ನೀಡಿದ್ದು ಐದು ತಾಸು ಶಿಫ್ಟ್ ಮೂಲಕ ವಿದ್ಯುತ್ ನ್ನು ರೈತರಿಗೆ ನೀಡಬೇಕು ಎಂದು ಹೇಳಿದ್ದಾರೆ.ಕೆಲವು ಕಡೆ ತಾಂತ್ರಿಕ ತೊಂದರೆಗಳಿಂದ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಅ. 26ನೇ ತಾರೀಖು ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.ಈಗಿರುವ ಬರಗಾಲದಲ್ಲಿ ನಾವೆಲ್ಲರೂ ಕೂಡ ಅನಿವಾರ್ಯ ಕಾರಣಗಳಿಂದ ಅನುಸರಿಸಿಕೊಂಡು ಹೋಗಬೇಕಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಈ ಬಗ್ಗೆ ನಮ್ಮ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರು ಯಾರೊಂದಿಗೂ ಚರ್ಚೆ ಮಾಡಬೇಡಿ ಎಂದು ತಿಳಿಸಿದ್ದಾರೆ.ಹಾಗಾಗಿ ನಿಮ್ಮೊಂದಿಗೂ ಚರ್ಚೆ ಮಾಡುವುದಿಲ್ಲ, ಪಕ್ಕದವರೊಂದಿಗೂ ಚರ್ಚೆ ಮಾಡುವುದಿಲ್ಲ ಎಂದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News