‘ಬ್ರ್ಯಾಂಡ್ ಬೆಂಗಳೂರು’ ತಜ್ಞರ ಸಮಿತಿ ರಚಿಸಿ ಸರಕಾರದ ಆದೇಶ
Update: 2023-07-21 15:06 GMT
ಬೆಂಗಳೂರು, ಜು.21: ಬೆಂಗಳೂರು ನಗರವನ್ನು ‘ಬ್ರ್ಯಾಂಡ್ ಬೆಂಗಳೂರು’ ಮತು ಜಾಗತಿಕ ನಗರವನ್ನಾಗಿ ಮಾಡಲು ಅಧ್ಯಯನ ಮತ್ತು ವರದಿಯನ್ನು ಸಲ್ಲಿಸಲು ರಾಜ್ಯ ಸರಕಾರವು ತಜ್ಞರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಸಮಿತಿಯ ಅಧ್ಯಕ್ಷರಾಗಿದ್ದು, ರಾಜ್ಯ ಸರಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ಮಾಜಿ ರಾಜ್ಯಸಭೆ ಸದಸ್ಯ ಎಂ.ವಿ.ರಾಜೀವ್ ಗೌಡ ಮತ್ತು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನ ನಿರ್ದೇಶಕ ರವಿಚಂದರ್ ಸಮಿತಿಯ ಸದಸ್ಯರಾಗಿದ್ದಾರೆ.
ನಗರದ ಟ್ರಾಫಿಕ್ ನಿರ್ವಹಣೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಯೋಜಿತ ಮತ್ತು ವೈಜ್ಞಾನಿಕ ರೀತಿಯಲ್ಲಿ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಮತ್ತು ಶಿಫಾರಸ್ಸುಗಳನ್ನು ಸಮಿತಿ ನೀಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.