ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ವಾಪಸ್ ಕಳುಹಿಸಿದ ರಾಜ್ಯಪಾಲ

Update: 2024-03-21 13:40 GMT

ಬೆಂಗಳೂರು: ಮುಜುರಾಯಿ ಇಲಾಖೆ ವ್ಯಾಪ್ತಿಯ ‘ಎ’ ಮತ್ತು ‘ಬಿ’ ಶ್ರೇಣಿಯ ದೇವಾಲಯಗಳ ಆದಾಯವನ್ನು ‘ಸಿ’ ಶ್ರೇಣಿಯ ದೇವಾಲಯಗಳ ಅಭಿವೃದ್ಧಿಗೆ ಬಳಸುವುದು ಹಾಗೂ ಹೆಚ್ಚಿನ ಆದಾಯವಿರುವ ದೇವಾಲಯಗಳಿಗೆ ತೆರಿಗೆ ವಿಧಿಸಲು ಉದ್ದೇಶಿಸಿರುವ ಹಿಂದೂ ಧಾರ್ಮಿಕ ದತ್ತಿ ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕಕ್ಕೆ ಸಹಿ ಹಾಕದೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ.

ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ವಿಧೇಯಕಕ್ಕೆ ವಿಧಾನಪರಿಷತ್ತಿನಲ್ಲಿ ಸೋಲುಂಟಾಗಿತ್ತು. ನಂತರ, ಪುನಃ ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು.

ವಿಧೇಯಕದಲ್ಲಿರುವ ಕೆಲವು ಅಂಶಗಳ ಕುರಿತು ಸ್ಪಷ್ಟಣೆ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿ, ವಿಧೇಯಕವನ್ನು ರಾಜ್ಯಪಾಲ ವಾಪಸ್ ಕಳುಹಿಸಿದ್ದಾರೆ. ದೇವಾಲಯಗಳಲ್ಲಿನ ಸಾಮಾನ್ಯ ಸಂಗ್ರಹಣ ನಿಧಿ ವಿಚಾರದಲ್ಲಿ ತಿದ್ದುಪಡಿ ಮಾಡಿದ್ದ ಸರಕಾರ, ಇದನ್ನು ಶೇ.10ಕ್ಕೆ ಏರಿಕೆ ಮಾಡಿತ್ತು.

ವಾರ್ಷಿಕವಾಗಿ 10 ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ವರೆಗೆ ಆದಾಯವಿರುವ ದೇವಾಲಯಗಳಿಗೆ ಶೇ.5ರಷ್ಟು ಮತ್ತು 1 ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯ ಇರುವ ದೇವಾಲಯಗಳಿಗೆ ಶೇ.10ರಷ್ಟು ತೆರಿಗೆ ವಿಧಿಸಲು ಈ ವಿಧೇಯಕದಲ್ಲಿ ಪ್ರಸ್ತಾವಿಸಲಾಗಿತ್ತು. ಇದಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಇದಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News