ಹಾಲಿನ ಪ್ರೋತ್ಸಾಹಧನ ವರ್ಗಾವಣೆ ವಿಚಾರದಲ್ಲಿ ಸರಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ: ಬೊಮ್ಮಾಯಿ

Update: 2024-02-20 12:11 IST
ಹಾಲಿನ ಪ್ರೋತ್ಸಾಹಧನ ವರ್ಗಾವಣೆ ವಿಚಾರದಲ್ಲಿ ಸರಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ: ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

  • whatsapp icon

ಬೆಂಗಳೂರು, ಫೆ.20: ರಾಜ್ಯದ 8.65 ಲಕ್ಷ ಹಾಲು ಉತ್ಪಾದಕರಿಗೆ 757 ಕೋಟಿ ರೂ. ಪ್ರೋತ್ಸಾಹಧನ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯಪಾಲರಿಂದ ಸುಳ್ಳು ಹೇಳಿಸಲಾಗಿದೆ. ಕಳೆದ ಆರು ತಿಂಗಳಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತ ರಾಜ್ಯಪಾಲರಿಂದ ಯಾವುದೇ ಸುಳ್ಳು ಹೇಳಿಸಿಲ್ಲ, ಸುಳ್ಳು ಹೇಳಿಸಿದ್ದರೆ ತೋರಿಸಿ ಎಂದು ಸವಾಲು ಹಾಕಿದರು. ಅವರ ಸವಾಲಿಗೆ ಪ್ರತ್ಯುತ್ತರ ನೀಡಿದ ಬೊಮ್ಮಾಯಿ, ಹಾಲು ಉತ್ಪಾದಕರು ಕಳೆದ ಆರು ತಿಂಗಳಿನಿಂದ ಯಾವುದೇ ಪ್ರೋತ್ಸಾಹ ಧನ ಬಂದಿಲ್ಲ ಅಂತ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ ಎಂದು ಹೇಳಿದರು.

ಅಲ್ಲದೇ ಐದು ಗ್ಯಾರೆಂಟಿ ಯೋಜನೆಗಳ ಜೊತೆಗೆ ಬಜೆಟ್ ನಲ್ಲಿ ಘೋಷಿಸಿರುವ ಶೇ.97ರಷ್ಟು ಘೋಷಣೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಅಂತ ಹೇಳಿಸಿದ್ದೀರಿ. ಸರ್ಕಾರ ಅಧಿಸೂಚನೆ ಹೊರಡಿಸಿರುವ ಯೋಜನೆಗಳು ಆರಂಭವೇ ಆಗಿಲ್ಲ. ಅದು ಸುಳ್ಳಲ್ಲವೇ ಎಂದು ಪ್ರಶ್ನಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದೂ ಹೊಸ ಬಸ್ ಖರೀದಿ ಮಾಡಿಲ್ಲ ಎಂದು ಸುಳ್ಳು ಹೇಳಿಸಿದ್ದೀರಿ. ಬಿಜೆಪಿ ಅವಧಿಯಲ್ಲಿ ನಾಲ್ಕು ನಿಗಮಗಳಿಗೆ ಬಸ್ ಖರೀದಿ ಮಾಡಲಾಗಿದೆ. 2022-23ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 3,526, ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ನಮ್ಮ ಅವಧಿಯಲ್ಲಿ ಬಿಎಂಟಿಸಿಗೆ 1,311 ಮತ್ತು ಕೆಎಸ್ಸಾರ್ಟಿಸಿಗೆ 50 ಪವರ್ ಪ್ಲಸ್ ಬಸ್ಸುಗಳು ಹಾಗೂ 20 ವೊಲ್ವೊ ಬಸ್ ಗಳನ್ನು ಖರೀದಿಸಿದ್ದು, ಅವುಗಳು ಕಾರ್ಯಾಚರಣೆ' ಪ್ರಾರಂಭಿಸಿದ್ದವು ಎಂದು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3000 ಕೋಟಿ ಮೀಸಲಿಟ್ಟಿದ್ದು, ಸರ್ಕಾರ ಈಗಾಗಲೇ 5468 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಮಂಜೂರು ಮಾಡಿ, ನವೆಂಬರ್ ಹೊತ್ತಿಗೆ 1287 ಕಾಮಗಾರಿ ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ. ನಮ್ಮ ಕಾಲದಲ್ಲಿ ಅನುಮೋದನೆಗೊಂಡ ಯೋಜನೆಗಳನ್ನು ನಿಮ್ಮ ಸಾಧನೆ ಅಂತ ಹೇಳಿಕೊಂಡಿದ್ದೀರಿ ಎಂದು ಪ್ರತ್ಯುತ್ತರ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News