ಗುಜರಾತ್ ಅಪೌಷ್ಠಿಕತೆಯಲ್ಲಿದ್ದು, ವಿಶ್ವಗುರು ಈಗ ಉತ್ತರಿಸಲಿ: ಸಿಎಂ ಸಿದ್ದರಾಮಯ್ಯ

Update: 2023-11-22 13:58 GMT

ಬೆಂಗಳೂರು: ಅಪೌಷ್ಠಿಕತೆ ಸೂಚ್ಯಂಕದಲ್ಲಿ ಗುಜರಾತ್ ರಾಜ್ಯ ಮತ್ತು ಭಾರತದ ಸೂಚ್ಯಂಕ ಏರಿಕೆ ಆಗುತ್ತಲೇ ಇದೆ. ಏಕೆ ಹೀಗಾಯ್ತು ಎಂದು ತನ್ನನ್ನು ತಾನು ವಿಶ್ವಗುರು ಎಂದು ಕರೆಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬುಧವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ‘ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ’ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಅವರು ಮಾತನಾಡಿದರು.

ಗುಜರಾತ್ ಮಾದರಿ ಎನ್ನುವವರು ಗುಜರಾತ್ ಅಪೌಷ್ಠಿಕತೆ ಸೂಚ್ಯಂಕದಲ್ಲಿ ಮೇಲಕ್ಕೆ ಏರುತ್ತಿರುವುದು ಏಕೆ ಎನ್ನುವುದಕ್ಕೆ ಉತ್ತರಿಸಬೇಕು. ಅಲ್ಲದೆ, ಗುಜರಾತಿನ ಈ ಸ್ಥಿತಿ ಮಾದರಿ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಬಡತನ ,ದಾರಿದ್ರ್ಯ, ಅನಕ್ಷರತೆ ಹೋಗದೆ ಎಲ್ಲರಿಗೂ ಉತ್ತಮ ಆರೋಗ್ಯ ಸಿಗುವುದಿಲ್ಲ. ಆದ್ದರಿಂದ ಈ ಮೂರು ಪಿಡುಗುಗಳಿಗೆ ಚಿಕಿತ್ಸೆ ಕೊಡುವುದು ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯದ ಸವಲತ್ತು ತಲುಪಿಸುವುದು ನಮ್ಮ ಸರಕಾರದ ಗುರಿಯಾಗಿದೆ. ಇದಕ್ಕಾಗಿ ಸರಕಾರ ಅಗತ್ಯವಿದ್ದಷ್ಟು ಹಣ ನೀಡಲು ಸಿದ್ದವಿದೆ. ಇನ್ನೂ, ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕವನ್ನಾಗಿಸುವುದು ನಮ್ಮ ಸರಕಾರದ ಗುರಿಯಾಗಿದ್ದು, ವೈದ್ಯರು ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕೆಂದರು.

ಮಕ್ಕಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಗರ್ಭಿಣಿಯರು, ಬಾಣಂತಿಯರು, ವಯಸ್ಕ ಪುರುಷರು-ಮಹಿಳೆಯರು ಹಾಗೂ ಹಿರಿಯರು ಸಮಾಜದಲ್ಲಿ ಆರೋಗ್ಯವಂತರಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ನುರಿತ ತಂಡದ ವೈದ್ಯರಿಂದ ರಕ್ತ ಪರೀಕ್ಷೆ ಮಾಡಿ, ಅನೀಮಿಯಾದಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ನಮಗೆ ಅನೇಕ ಕಾರಣಗಳಿಂದ ಆರೋಗ್ಯ ಹದಗೆಟ್ಟು ಕೆಲವು ರೋಗಗಳಿಗೆ ತುತ್ತಾಗುತ್ತೇವೆ. ಕೆಲವು ರೋಗಳನ್ನು ಪ್ರಯತ್ನದಿಂದ ತಡೆಗಟ್ಟಲು ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಪೌಷ್ಠಿಕ ಆಹಾರ ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಸಮಾಜದಲ್ಲಿ ಅನಕ್ಷರತೆ ಮತ್ತು ಬಡತನವಿದ್ದು, ಬಡತನ ಇರುವವರಿಗೆ ಪೌಷ್ಠಿಕ ಆಹಾರ ಸಿಗುವುದು ಕಷ್ಟ. ಆರ್ಥಿಕವಾಗಿ ಸಬಲರಾದರೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಸಾಧ್ಯವಾಗುತ್ತದೆ ಎಂದರು.

ಅನಕ್ಷರತೆಯ ಕಾರಣದಿಂದಲೂ ಸಹ ಬಹಳಷ್ಟು ಪೌಷ್ಠಿಕ ಆಹಾರ ಪಡೆಯಲು ಕಷ್ಟವಾಗುತ್ತಿದೆ. ಉತ್ತರ ಕರ್ನಾಟಕದವರು ಜೋಳದ ರೊಟ್ಟಿ ಕಾರ, ನಮ್ಮಲ್ಲಿ ಮುದ್ದೆ ಸಾರು ತಿಂದು ಹಾಗೆ ಇರುತ್ತಾರೆ. ಇದರಿಂದ ಅವರಿಗೆ ಪೌಷ್ಠಿಕ ಆಹಾರ ಎಲ್ಲಿ ಸಿಗುತ್ತದೆ. ಇದಕ್ಕೆ ಜ್ಞಾನದ ಕೊರತೆಯು ಕಾರಣವಾಗಿದೆ. ರಕ್ತಹೀನತೆ ಇದ್ದರೆ ಮಕ್ಕಳಿಗೆ ಓದಲು ಸಹ ಸಾಧ್ಯವಾಗುವುದಿಲ್ಲ ಎಂಬುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಮೊದಲ ಹಂತದಲ್ಲಿ ಶಾಲಾ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಹಾಲುಣಿಸುವ ತಾಯಂದಿರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ರಕ್ತ ಹೀನತೆಯನ್ನು ತಪಾಸಣೆ ನಡೆಸಿ, ನಂತರ ಉಳಿದವರಿಗೆ ತಪಾಸಣೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ಭೈರತಿ ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News