ಕೇರಳದಲ್ಲಿ ನಕ್ಸಲರು, ಪೊಲೀಸರ ಮಧ್ಯೆ ಗುಂಡಿನ ಚಕಮಕಿ: ಶೃಂಗೇರಿ ಮೂಲದ ಮಹಿಳೆಯ ಬಂಧನ
ಚಿಕ್ಕಮಗಳೂರು: ಕೇರಳದ ವಯನಾಡು ಜಿಲ್ಲೆಯಲ್ಲಿ ನಕ್ಸಲ್ ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಚಿಕ್ಕಮಗಳೂರು ಮೂಲದ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದ್ದು, ಬಂಧಿತ ಮಹಿಳೆಯು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡು ಕುಡಿಗೆ ಗ್ರಾಮದ ಶ್ರೀಮತಿ ಅಲಿಯಾಸ್ ಉನ್ನಿಮಾಯ ಎಂದು ತಿಳಿದು ಬಂದಿದೆ.
ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿರುವ ಕೇರಳ ರಾಜ್ಯದ ತಳಪುಝ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದಕ್ಕೆ ಕಳೆದ ಮಂಗಳವಾರ ರಾತ್ರಿ ಐವರು ನಕ್ಸಲರ ತಂಡ ಊಟಕ್ಕೆಂದು ತೆರಳಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಶರಣಾಗುವಂತೆ ಸೂಚಿಸಿದಾಗ ನಕ್ಸಲರು ಹಾಗೂ ಪೊಲೀಸರ ಮಧ್ಯೆ ಕೆಲ ಹೊತ್ತು ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಮೂವರು ನಕ್ಸಲರು ಪರಾರಿಯಾಗಿದ್ದರೆ, ಕೇರಳದ ನಕ್ಸಲ್ ಮುಖಂಡ ಕೇರಳ ಮೂಲದವರೇ ಆದ ಚಂದ್ರು ಅಲಿಯಾಸ್ ತಿರುವೆಂದಿಗಮ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಶ್ರೀಮತಿಯನ್ನು ಪೊಲೀಸರು ವಶಕ್ಕೆ ಪಡೆದರು. ಇವರಿಬ್ಬರೂ ಕೇರಳ ಹಾಗೂ ಕರ್ನಾಟಕದ ಪೊಲೀಸರಿಗೆ ಹಲವು ಪ್ರಕರಣದಲ್ಲಿ ಬೇಕಾಗಿದ್ದರೆಂದು ತಿಳಿದು ಬಂದಿದೆ.
ಶೃಂಗೇರಿ ತಾಲೂಕಿನ ಬೇಗಾರ್ ಗ್ರಾಪಂ ಕೆ.ಮಸಿಗೆ ಗ್ರಾಮದ ಬೆಳಗೋಡು ಕುಡಿಗೆ ಗ್ರಾಮದ ಶ್ರೀಮತಿ 2007ರಲ್ಲಿ ಮನೆಯಿಂದ ನಾಪತ್ತೆಯಾಗಿ ನಕ್ಸಲ್ ಗುಂಪಿಗೆ ಸೇರಿದ್ದರು. 2009ರ ತನಿಕೋಡು ಚೆಕ್‌ಪೋಸ್ಟ್ ಬಳಿ ಅರಣ್ಯ ಇಲಾಖೆ ತಪಾಸಣಾ ಕೊಠಡಿ ಧ್ವಂಸ ಪ್ರಕರಣ ಹಾಗೂ ಲೋಕಸಭೆ ಚುನಾವಣೆ ಸಂದರ್ಭ ಮಾತೊಳ್ಳಿಯಲ್ಲಿ ಪೊಲೀಸರೊಂದಿಗೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿರುವುದೂ ಸೇರಿದಂತೆ ಕರ್ನಾಟಕ ಹಾಗೂ ಕೇರಳ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ಶ್ರೀಮತಿ ಮೇಲೆ ದಾಖಲಾಗಿವೆ ಎಂದು ತಿಳಿದು ಬಂದಿದೆ. ಕೇರಳ ಪೊಲೀಸರು ಶೃಂಗೇರಿ ಮೂಲದ ಶ್ರೀಮತಿಯನ್ನು ಬಂಧಿಸಿರುವುದನ್ನು ಜಿಲ್ಲೆಯ ಪೊಲೀಸ್ ಮೂಲಗಳು ಖಚಿತ ಪಡಿಸಿವೆ.