ಹಾಸನ: ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಮೃತ್ಯು

Update: 2023-08-24 12:41 GMT

ಮೃತಪಟ್ಟಿರುವ ದಂಪತಿ

ಅರಕಲಗೂಡು (ಹಾಸನ): ಕಲುಷಿತ ಅಹಾರ ಸೇವಿಸಿ ಅಸ್ವಸ್ಥಗೊಂಡಿದ್ದರೆನ್ನಲಾದ ದಂಪತಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ತಾಲೂಕಿನ ಬಿಸಿನಹಳ್ಳಿಯಲ್ಲಿ ಗುರುವಾರ ವರದಿಯಾಗಿದೆ.

ಗ್ರಾಮದ ಉಮಾ (48), ನಂಜುಂಡಪ್ಪ (55) ಮೃತಪಟ್ಟಿರುವ ದಂಪತಿ ಎಂದು ತಿಳಿದು ಬಂದಿದೆ. 

ಕಳೆದ ಆಗಸ್ಟ್ 15 ರಂದು ಮನೆಯಲ್ಲಿ ಊಟ ಮಾಡಿದ ಬಳಿಕ ದಂಪತಿಯ ಆರೋಗ್ಯ ಕೆಟ್ಟಿತ್ತು. ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲ ದಿನಗಳ ನಂತರ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. ಆದರೆ, ಬುಧವಾರ ಇಬ್ಬರೂ ಹಠಾತ್ ಸಾವಿಗೀಡಾಗಿದ್ದಾರೆಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಪೋಷಕರ ಹಠಾತ್ ಸಾವಿನ ಬಗ್ಗೆ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದು ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದ ವೇಳೆ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಅಂತ್ಯಕ್ರಿಯೆಗೆ ತಡೆದಿದ್ದಾರೆ. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಕುಟುಂಬ ಸದಸ್ಯರ ಮನವೊಲಿಕೆ ಬಳಿಕ ಎರಡೂ ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ. 

ಈ ನಡುವೆ ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡು ಕೊಣನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News