ಎಚ್‍ಎಂಟಿ ಕಾರ್ಖಾನೆಯ ಅಧೀನದಲ್ಲಿರುವ ಭೂಮಿಯನ್ನು ರಾಜ್ಯ ಸರಕಾರಕ್ಕೆ ಕೊಡಲ್ಲ : ಎಚ್‌ಡಿಕೆ
ಬೆಂಗಳೂರು : ಕೇಂದ್ರ ಸರಕಾರಿ ಸ್ವಾಮ್ಯದ ಎಚ್‍ಎಂಟಿ ಕಾರ್ಖಾನೆಯ ಅಧೀನದಲ್ಲಿರುವ ಭೂಮಿಯನ್ನು ರಾಜ್ಯ ಸರಕಾರಕ್ಕೆ ವಾಪಸ್ಸು ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಎಚ್‍ಎಂಟಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ರಾಜ್ಯ ಸರಕಾರ ದುರುದ್ದೇಶಪೂರಿತವಾಗಿ ಭೂಮಿ ವಿಷಯದಲ್ಲಿ ಕಿರುಕುಳ ನೀಡಿದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.
ಅರಣ್ಯ ಇಲಾಖೆ ಭೂಮಿಯನ್ನು ಅಕ್ರಮವಾಗಿ ವಿವಿಧ ಸರಕಾರಿ ಸಂಸ್ಥೆ, ಇಲಾಖೆಗಳಿಗೆ ಮತ್ತು ಖಾಸಗಿಯವರಿಗೆ ಸಂಸ್ಥೆ ಮಾರಾಟ ಮಾಡಿದೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿರುವ ಹೇಳಿಕೆ ಖಂಡನೀಯ. ಸರ್ ಎಂ ವಿಶ್ವೇಶ್ವರಯ್ಯ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಎಚ್‍ಎಂಟಿ ಕಾರ್ಖಾನೆಗೆ ಯಾವುದೇ ಜಮೀನನ್ನು ಉಚಿತವಾಗಿ, ಪುಕ್ಕಟೆಯಾಗಿ ನೀಡಿಲ್ಲ. ಬೇಕಿದ್ದರೆ ರಾಜ್ಯ ಅರಣ್ಯ ಸಚಿವರು ದಾಖಲೆಗಳನ್ನು ತೆಗೆದು ನೋಡಲಿ ಎಂದು ಸವಾಲು ಹಾಕಿದರು.
ಕಾರ್ಖಾನೆಯ ವಶದಲ್ಲಿರುವ ಜಮೀನು ತೆಗೆದುಕೊಂಡು ಏನು ಮಾಡುತ್ತೀರಿ ಸಚಿವರೇ? ಯಾವ ಬಿಲ್ಡರ್‌ಗೆ ದಾನ ಮಾಡುತ್ತೀರಿ? ಹಿಂದೆ ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ನಿಮ್ಮ ಪಕ್ಷದ ನಾಯಕರು ಮಾಡಿದ್ದೇನು ಎಂಬುದನ್ನು ಸ್ವಲ್ಪ ತಿಳಿದುಕೊಂಡು ಮಾತನಾಡಿ ಎಂದು ವಾಗ್ದಾಳಿ ನಡೆಸಿದರು.
ಒಂದು ಕಡೆ ರಾಜ್ಯಕ್ಕೆ ಕೇಂದ್ರ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪ ಮಾಡುತ್ತೀರಿ. ಇನ್ನೊಂದು ಕಡೆ ರಾಜ್ಯಕ್ಕೆ ಒಳ್ಳೆಯದು ಮಾಡಲು ಬರುವ ಕೇಂದ್ರ ಸಚಿವರಿಗೆ ಅಡ್ಡಿ ಮಾಡುತ್ತೀರಿ. ಜನತೆಯ ಆಶೀರ್ವಾದ ಹಾಗೂ ಭಗವಂತನ ಕೃಪೆಯಿಂದ ನಾನು ಕೇಂದ್ರದ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವನಾಗಿದ್ದೇನೆ. ಸಿಕ್ಕಿರುವ ಕಾಲಾವಕಾಶದಲ್ಲಿ ರಾಜ್ಯಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವುದು ನನ್ನ ಕಳಕಳಿ ಎಂದು ಅವರು ಹೇಳಿದರು.
ಕೇಂದ್ರಕ್ಕೆ ಸಹಕಾರ ಕೊಡಿ: ನನಗೆ ಅಸಹಕಾರ ಕೊಟ್ಟರೆ ನಿಮಗೆ ಸಿಗುವ ಲಾಭ ಏನು? ಇಲ್ಲಿ ಕುಮಾರಸ್ವಾಮಿ ಮುಖ್ಯವಲ್ಲ. ರಾಜ್ಯಕ್ಕೆ ಒಳ್ಳೆಯದು ಆಗಬೇಕು. ಅದಕ್ಕಾಗಿ ನನಗೆ, ಕೇಂದ್ರ ಸರಕಾರಕ್ಕೆ ಸಹಕಾರ ಕೊಡಿ. ಇನ್ನಾದರೂ ಲೂಟಿ ಹೊಡೆಯುವುದು ನಿಲ್ಲಿಸಿ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಿ. ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆಯನ್ನು ಪತ್ರಿಕೆಯಲ್ಲಿ ಓದಿ ನನ್ನ ಕಣ್ಣಲ್ಲಿ ನೀರು ಬಂತು. ಎಚ್‍ಎಂಟಿಯಂತಹ ಕಾರ್ಖಾನೆಗಳನ್ನು ಕಳೆದುಕೊಂಡು ಏನು ಸಾಧನೆ ಮಾಡುತ್ತೀರಿ? ಎಂದು ಕೇಳಿದರು.