ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು : ಎಚ್‍.ಡಿ.ಕುಮಾರಸ್ವಾಮಿ

Update: 2024-08-21 12:34 GMT

 ಎಚ್‍.ಡಿ.ಕುಮಾರಸ್ವಾಮಿ(PTI)

ಬೆಂಗಳೂರು : ನನಗೆ ಯಾವುದೇ ಭಯವಿಲ್ಲ. ನನ್ನ ಬಂಧನ ಮಾಡುವುದಕ್ಕೂ ನೂರು ಜನ ಸಿದ್ದರಾಮಯ್ಯ ಬರಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬುಧವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದಲ್ಲಿ ನನ್ನ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‍ಗೆ ಅನುಮೋದನೆಗೆ ಕೋರಿದ್ದಾರೆ. ಅನುಮತಿ ಕೋರಿರೋದು 2023 ನವೆಂಬರ್‌ನಲ್ಲಿ. ಸುಮಾರು ಹತ್ತು ತಿಂಗಳಾಗಿದೆ ಎಂದು ಹೇಳಿದರು.

ಮುಡಾ ಆಸ್ತಿಯನ್ನು ನನ್ನ ಆಸ್ತಿ ಎಂದು ಹೇಳುತ್ತಿದ್ದಾರೆ. ಇಂತಹ ಭಂಡತನ ಯಾವ ಸಿಎಂ ಕೂಡ ತೋರಿಲ್ಲ. ಆದರೆ,ಇದೀಗ ನನ್ನನ್ನು ಬಂಧಿಸುವುದಾಗಿ ಹೇಳುತ್ತಿದ್ದು, ಇಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ತಿಳಿಸಿದರು.

ನಾನು ಕೇಂದ್ರ ಸಚಿವನಾಗಿದ್ದೇನೆ ಎಂಬ ಹೊಟ್ಟೆಕಿಚ್ಚಿಗೆ ರಾಜ್ಯ ಕಾಂಗ್ರೆಸ್ ಸರಕಾರ ನನ್ನ ಮೇಲೆ ಹಗೆ ಸಾಧಿಸುತ್ತಿದೆ. ಯಾವತ್ತೊ ಸತ್ತು ಹೋದ ಪ್ರಕರಣವನ್ನು, ನನ್ನ ಸಹಿ ಇಲ್ಲದ ಪ್ರಕರಣವನ್ನು ಇಟ್ಟುಕೊಂಡು ನನ್ನ ಮೇಲೆ ಪ್ರಯೋಗ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಸಾಯಿ ವೆಂಕಟೇಶ್ವರ ಮಿನರಲ್ಸ್ ವಿಚಾರದಲ್ಲಿ ನಾನು ಕಾನೂನು ಹೋರಾಟ ಮಾಡುತ್ತೇನೆ. ಇಂತಹ ಪರಿಸ್ಥಿತಿಗಳಲ್ಲಿ ಕಾನೂನು ಮೊರೆ ಹೋಗಲೇಬೇಕು. ನೆಲದ ಕಾನೂನಿಗೆ ನಾವು ತಲೆಬಾಗಲೇಬೇಕು ಎಂದ ಅವರು, ಈ ಕಂಪೆನಿಗೆ ನಾನು ಸೂಜಿ ಮೊನೆಯಷ್ಟು ಜಾಗವನ್ನೂ ನೀಡಿಲ್ಲ. ಕೇಂದ್ರ ಸರಕಾರವು ಅನುಮತಿಯನ್ನೆ ಕೊಟ್ಟಿಲ್ಲ, ರಾಜ್ಯದ ಬೊಕ್ಕಸಕ್ಕೆ ನಯಾಪೈಸೆ ನಷ್ಟವೂ ಆಗಿಲ್ಲ. ವಿಷಯ ಹೀಗಿದ್ದ ಮೇಲೆ ಸಿಟ್ ರಾಜ್ಯಪಾಲರಿಂದ ಪ್ರಾಸಿಕ್ಯೂಶನ್‍ಗೆ ಹೇಗೆ ಅನುಮತಿ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ಈ ಹಿಂದೆ ಕಾಂಗ್ರೆಸ್ ನಾಯಕರು, ಬಿಜೆಪಿ ಮೇಲೆ 21 ಪ್ರಕರಣವಿದೆ ಎಂದು ಬೊಂಬು ಹಿಡಿದು ಹೇಳಿದರು. ಅಧಿಕಾರ ಬಂದರು ಒಂದನ್ನು ಸಾಬೀತು ಮಾಡುವುದು ಅವರಿಂದ ಸಾಧ್ಯ ಆಗಲಿಲ್ಲ. ಈಗ ನನ್ನ ವಿರುದ್ಧ ಹೆಣಗಾಡುತ್ತಿದ್ದಾರೆ. ಬೇಕಾದರೆ ಜೀವ ಇರುವ ಕೇಸನ್ನಾದರೂ ತನ್ನಿ ಸಿದ್ದರಾಮಯ್ಯನವರೇ ಎಂದು ಅವರು ಲೇವಡಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News