ಮುಡಾ ಪ್ರಕರಣ | ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆಗ್ರಹಿಸಿ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಎಚ್‌ಡಿಕೆ

Update: 2024-10-02 11:56 GMT

ಸಿದ್ದರಾಮಯ್ಯ/ಕುಮಾರಸ್ವಾಮಿ/ಅಮಿತ್‌ ಶಾ

ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಮತ್ತು ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರ ವಂಚನೆಗಳ ಬಗ್ಗೆ ಸ್ವತಂತ್ರ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಸಿದ್ದರಾಮಯ್ಯ ಅವರ ಮುಡಾ ಪ್ರಕರಣ ಈಗ ಲೋಕಾಯುಕ್ತ ಪೊಲೀಸರ ಕೈಯ್ಯಲ್ಲಿದೆ. ಎಡಿಜಿಪಿ ಬರೆದ ನಿಂದನಾ ಪತ್ರದ ಬಳಿಕ, ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ಪೊಲೀಸರು ನಿಷ್ಪಕ್ಷಪಾತ ತನಿಖೆಯನ್ನು ಮಾಡುತ್ಥಾರೆಂದು ಯಾರಾದರೂ ನಿರೀಕ್ಷಿಸಬಹುದೇ? ಲೋಕಾಯುಕ್ತ ಅಧಿಕಾರಿಗಳು ಕಾಂಗ್ರೆಸ್‌ಗೆ ಇಷ್ಟೊಂದು ನಿಷ್ಠೆಯನ್ನು ವ್ಯಕ್ತಪಡಿಸಿದಾಗ ಈ ಸಂಸ್ಥೆಯಿಂದ ನ್ಯಾಯಯುತ ತನಿಖೆ ನಡೆಯಬಹುದೇ? ಆದ್ದರಿಂದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದು ಕುಮಾರಸ್ವಾಮಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಐಪಿಎಸ್ ಅಧಿಕಾರಿಯಾಗಿ ಚಂದ್ರಶೇಖರ್ ಸೇವಾ ನಿಯಮ ಉಲ್ಲಂಘಿಸಿದ್ದಾರಯೇ ಎಂದು ಪರಿಶೀಲಿಸಬೇಕು. ಚಂದ್ರಶೇಖರ್ ವಂಚನೆಗಳ ಬಗ್ಗೆ ಸ್ವತಂತ್ರ ಇಲಾಖೆಯಿಂದ ತನಿಖೆ ನಡೆಸಬೇಕು. ಕರ್ನಾಟಕ ಕೇಡರ್ ಅಧಿಕಾರಿ ಅಲ್ಲದಿದ್ದರೂ ಇಲ್ಲಿ ಇರಲು ನಿಯಮ ಉಲ್ಲಂಘಿಸಿದ್ದಾರೆಯೇ ಎಂಬುದನ್ನು ಕೂಡ ಪರಿಶೀಲಿಸಬೇಕಿದೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ನಾನು ಪತ್ರಿಕಾಗೋಷ್ಠಿ ನಡೆಸಿದ್ದೆ, ರಾಜ್ಯಪಾಲರ ಕಚೇರಿಯ ಘನತೆಗೆ ಧಕ್ಕೆ ತರಲು ಕಾಂಗ್ರೆಸ್ ಸರಕಾರ ಮಾಡಿದ ಪಿತೂರಿಯನ್ನು ಪ್ರಾಥಮಿಕವಾಗಿ ಬಯಲಿಗೆಳೆದಿದ್ದೆ. ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಆಡಳಿತದೊಂದಿಗೆ ಕೈಜೋಡಿಸಿ ರಾಜ್ಯಪಾಲರ ಕಚೇರಿಗೆ ಅಪಖ್ಯಾತಿ ತರಲು ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಜೊತೆ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಕೈಜೋಡಿಸಿರುವ ಬಗ್ಗೆಯೂ ನಾನು ಉಲ್ಲೇಖಿಸಿದ್ದೆ. ಈ ವೇಳೆ ಕರ್ನಾಟಕ ಲೋಕಾಯುಕ್ತದಲ್ಲಿ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ವಿರುದ್ಧ ನಾನು ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದೆ. ದುರಹಂಕಾರದಿಂದ ಈ ಅಧಿಕಾರಿ ನನ್ನ ಪತ್ರಿಕಾಗೋಷ್ಠಿಗೆ ಪ್ರತಿಕ್ರಿಯೆಯಾಗಿ ಪತ್ರವೊಂದನ್ನು ಬರೆದು ಮಾಧ್ಯಮಗಳಿಗೆ ಪ್ರಸಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News