ಜನರ ಜೀವ ರಕ್ಷಣೆಯಲ್ಲಿ ‘ಗೃಹ ಆರೋಗ್ಯ’ ಯೋಜನೆ ಮಹತ್ವದ್ದು : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Update: 2024-10-24 15:17 GMT

ಬೆಂಗಳೂರು : ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮೂಲಕ ಜನರ ಜೀವ ರಕ್ಷಣೆಯಲ್ಲಿ ‘ಗೃಹ ಆರೋಗ್ಯ’ ಮಹತ್ವದ ಯೋಜನೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಗೃಹ ಆರೋಗ್ಯ’ ನೂತನ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆ ವಿಚಾರದಲ್ಲಿ ಗೃಹ ಆರೋಗ್ಯ ದೂರದೃಷ್ಟಿಯ ಯೋಜನೆಯಾಗಿದೆ ಎಂದರು.

ಈ ‘ಗೃಹ ಆರೋಗ್ಯ ಯೋಜನೆ ಕೋಲಾರ ಜಿಲ್ಲೆಯಿಂದ ಆರಂಭವಾಗಿ, ಜನವರಿ ತಿಂಗಳಿನಲ್ಲಿ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಅಸಾಂಕ್ರಾಮಿಕ ರೋಗಗಳನ್ನು ಹತೋಟಿಗೆ ತರುವುದು ಗೃಹ ಆರೋಗ್ಯ ಯೋಜನೆಯ ಮುಖ್ಯ ಗುರಿಯಾಗಿದೆ. ಎಂದರು ದಿನೇಶ್ ಗುಂಡೂರಾವ್ ಹೇಳಿದರು.

ದೇಶದಲ್ಲಿ ಅಸಾಂಕ್ರಾಮಿಕ ರೋಗಗಳ ಪ್ರಮಾಣ ಹೆಚ್ಚುತ್ತಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಶೇ.26.9ರಷ್ಟು ರಕ್ತದೊತ್ತಡ, ಶೇ.15.6ರಷ್ಟು ಮಧುಮೇಹ ರೋಗಗಳಿಂದ ಜನರು ಬಳಲುತ್ತಿದ್ದು, ಇದರಿಂದ ಉಂಟಾಗುತ್ತಿರುವ ಮರಣ ಹಾಗೂ ಅನಾರೋಗ್ಯ ತೊಡಕುಗಳನ್ನು ತಡೆಗಟ್ಟಲು ಗೃಹ ಆರೋಗ್ಯ ಯೋಜನೆ ಸಹಕಾರಿಯಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಅಲ್ಲದೇ ರಾಜ್ಯದಲ್ಲಿ ಶೇ.11.5ರಷ್ಟು ಬಾಯಿ ಕ್ಯಾನ್ಸರ್, ಶೇ. 26ರಷ್ಟು ಸ್ತನ ಕ್ಯಾನ್ಸರ್ ಹಾಗೂ ಶೇ.18.3ರಷ್ಟು ಗರ್ಭಕಂಠದ ಕ್ಯಾನ್ಸರ್ ರೋಗಗಳಿಂದ ಜನರು ತತ್ತರಿಸುತ್ತಿದ್ದು, ಈ ರೋಗಗಳಿಗೂ ಪರಿಹಾರ ಒದಗಿಸಲು ಗೃಹ ಆರೋಗ್ಯ ಯೋಜನೆಯಲ್ಲಿ ರೂಪ ರೇಷೆಗಳನ್ನು ಸಿದ್ಧಪಡಿಸಲಾಗಿದೆ. ಹಳ್ಳಿಗಾಡಿನ ಜನರು ರಕ್ತದೊತ್ತಡ, ಮಧುಮೇಹ ರೋಗಗಳ ತಪಾಸಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಇದೀಗ ಆರೋಗ್ಯ ಇಲಾಖೆಯನ್ನೇ ಜನರ ಮನೆ ಬಳಿಗೆ ಕಳಿಸುತ್ತಿದ್ದೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ನಮ್ಮ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ. ರೋಗಕ್ಕೆ ತುತ್ತಾದವರಿಗೆ ಸೂಕ್ತ ಔಷಧಿಗಳನ್ನು ತಲುಪಿಸಲಾಗುತ್ತದೆ. ಜನರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಆರಂಭಿಕ ಹಂತದಲ್ಲಿ ರಕ್ತದೊತ್ತಡ ಮಧುಮೇಹವನ್ನು ಜನರು ನಿರ್ಲಕ್ಷಿಸುತ್ತಾರೆ. ಆದರೆ ದೀರ್ಘಾವಧಿಯಲ್ಲಿ ಈ ರೋಗಗಳೇ ಕಿಡ್ನಿ ವೈಫಲ್ಯ, ಹೃದಯಾಘಾತಗಳಿಗೆ ಕಾರಣವಾಗುತ್ತದೆ. ಗೃಹ ಆರೋಗ್ಯದ ಮುಖಾಂತರ ನಾವು ತಪಾಸಣೆ ನಡೆಸಿ ಔಷಧಿಗಳನ್ನು ಕೊಟ್ಟರೆ ಮುಂದೆ ಆಗುವ ಜೀವಪಾಯಗಳನ್ನು ತಡೆಗಟ್ಟಬಹುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಏನಿದು ‘ಗೃಹ ಆರೋಗ್ಯ’ ಯೋಜನೆ: ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಸುರಕ್ಷಾಣಾಧಿಕಾರಿಗಳು ಸೇರಿದಂತೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಜನರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ.

-ವಾರದಲ್ಲಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ದಿನಕ್ಕೆ 15 ಮನೆಗಳಂತೆ ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿದ್ದಾರೆ.

-ಬಾಯಿ ಕ್ಯಾನ್ಸರ್, ಮಹಿಳೆಯರ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಸಹ ಭೇಟಿಯ ಸಂದರ್ಭದಲ್ಲಿ ಪರೀಕ್ಷಿಸಲಾಗುತ್ತದೆ.

-ಅಸಂಕ್ರಾಮಿಕ ರೋಗಗಳಿಂದ ದೂರವಿರಲು ಜೀವನಶೈಲಿ ಮಾರ್ಪಾಡು ಮಾಡಲು ಆರೋಗ್ಯ ಸಿಬ್ಬಂದಿಯಿಂದ ಸಲಹೆ ನೀಡಲಾಗುತ್ತದೆ.

-ರೋಗಗಳಿಗೆ ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧಿಗಳನ್ನು ಮಾತ್ರೆ ಪಟ್ಟಿಗೆ ಮುಖಾಂತರ ಜನರ ಬಳಿಗೆ ಒದಗಿಸಲು ಯೋಜನೆಯಲ್ಲಿ ರೂಪ ರೇಷೆ ಸಿದ್ಧಪಡಿಸಲಾಗಿದೆ.

-ಕೋಲಾರ ಜಿಲ್ಲೆಯಿಂದ ಯೋಜನೆ ಆರಂಭವಾಗುತ್ತಿದ್ದು, ಜನವರಿ ತಿಂಗಳ ಬಳಿಕ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News