ಶಾಸಕ ಎಚ್‌.ಡಿ. ರೇವಣ್ಣಗೆ ಮತ್ತೆ ಸಮನ್ಸ್‌ ಜಾರಿ ಮಾಡಲು ಹೈಕೋರ್ಟ್‌ ಆದೇಶ

Update: 2023-10-30 14:00 GMT

ಬೆಂಗಳೂರು, ಅ.30: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಡಿ.ರೇವಣ್ಣ ಹಲವು ಅಕ್ರಮ ನಡೆಸಿ ಆಯ್ಕೆಯಾಗಿದ್ದಾರೆ. ಅವರ ಬೆಂಬಲಿಗರು ಅಣ್ಣೆಹಳ್ಳಿಯಲ್ಲಿ ಮತದಾರರಿಗೆ ತಲಾ 2 ಕೋಳಿ ಮತ್ತು 2 ಸಾವಿರ ನಗದು ಹಂಚಿ ಮತ ಹಾಕಿಸಿಕೊಂಡಿದ್ದಾರೆ ಎಂಬ ಆರೋಪವೂ ಸೇರಿದಂತೆ ವಿವಿಧ ಅಕ್ರಮ ನಡೆಸಿ ಗೆದ್ದಿರುವ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಲಾದ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ರೇವಣ್ಣ ಅವರಿಗೆ ಮತ್ತೊಂದು ಬಾರಿ ಸಮನ್ಸ್ ಜಾರಿ ಮಾಡಲು ಹೈಕೋರ್ಟ್ ಆದೇಶಿಸಿದೆ.

ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಡಿ.ರೇವಣ್ಣ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡಿರುವ ಹೈಕೋರ್ಟ್ ವಕೀಲ ದೇವರಾಜೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ. 

ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠವು ರೇವಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿತ್ತು. ಆದರೆ, ಪ್ರತಿವಾದಿ ರೇವಣ್ಣ ಸಮನ್ಸ್ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿಗೊಳಿಸಲು ಆದೇಶಿಸಲಾಗಿದ್ದು, ವಿಚಾರಣೆಯನ್ನು ನ.29ಕ್ಕೆ ಮುಂದೂಡಲಾಗಿದೆ.

ಅರ್ಜಿಯಲ್ಲಿ ಏನಿದೆ?: ಶಾಂತಿ ಗ್ರಾಮದ ಬಳಿ ಜನರಿಗೆ ದುಡ್ಡು, ಕೋಳಿಯ ಆಮಿಷವೊಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಅವರ ಬೆಂಬಲಿಗರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಿಥುನ್, ಮೋಹನ್, ಮಂಜು ಮತ್ತು ಶಂಕರ್ ಸೇರಿ 30 ಮಂದಿ ವಿರುದ್ಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ರೇವಣ್ಣ ಸಲ್ಲಿಸಿರುವ ನಾಮಪತ್ರವೇ ದೋಷಪೂರಿತ. ಇದರಲ್ಲಿ ಅವರು ತಮ್ಮ ಆಸ್ತಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲ್ಲ. ಆದರೂ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸಿಂಧು ಎಂದು ಘೋಷಿಸಿದ್ದಾರೆ.

ಭವಾನಿ ರೇವಣ್ಣ ಅವರ ಆಸ್ತಿಯ ವಿವರಗಳೂ ಸುಳ್ಳಿನಿಂದ ಕೂಡಿವೆ. ಹೀಗಾಗಿ, ರೇವಣ್ಣ ಭಾರಿ ಅಕ್ರಮ ಎಸಗಿ ಜಯಗಳಿಸಿದ್ದಾರೆ. ಮತಗಳಿಕೆಯಲ್ಲಿ 2ನೆ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಕೂಡ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಹೀಗಾಗಿ ಇವರಿಬ್ಬರ ಮತ ಗಳಿಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಕರಣದಲ್ಲಿ ಶ್ರೇಯಸ್ ಎಂ.ಪಟೇಲ್, ಗೀತಾ ಶಿವಸ್ವಾಮಿ, ಬಿ.ಕೆ.ನಾಗರಾಜ, ಎಚ್.ಎಸ್. ತಾರೇಶ್ ಮತ್ತು ಡಿ.ಆರ್.ರಂಗಸ್ವಾಮಿ ಅವರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News