ಸಂಸದ ಪ್ರತಾಪ್ ಸಿಂಹ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗೆ ಹೈಕೋರ್ಟ್ ನಿರ್ಬಂಧ
ಬೆಂಗಳೂರು : ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುದ್ದಿಗೋಷ್ಠಿ ಹಾಗೂ ಮಾನಹಾನಿ ಹೇಳಿಕೆಯನ್ನು ಮಾಧ್ಯಮಗಳ ಮೂಲಕ ನೀಡದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗೆ ಕರ್ನಾಟಕ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ತಮ್ಮ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ವಿಧಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ತೆರವುಗೊಳಿಸಿ, ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಮಾರ್ಚ್ 6ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಪ್ರತಾಪ್ ಸಿಂಹ ಸಲ್ಲಿಸಿದ್ದ ಎಂಎಫ್‌ಎ ಅರ್ಜಿಯ ವಿಚಾರಣೆ ನ್ಯಾ.ನಟರಾಜ್ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ಮೇಲ್ಮನವಿ ಅರ್ಜಿ ವಿಚಾರಣೆ ಮುಗಿಯುವವರೆಗೂ ಯಾವುದೇ ಹೇಳಿಕೆ ನೀಡದಂತೆ ಮಧ್ಯಂತರ ಆದೇಶ ನೀಡಿದೆ. ಅಲ್ಲದೆ ಪ್ರತಿವಾದಿಯಾಗಿರುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗೆ ನೋಟಿಸ್ ಜಾರಿಗೊಳಿಸಿದೆ.
ಪ್ರತಾಪ್ ಸಿಂಹ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಸಿ, ಲಕ್ಷ್ಮಣ್ ಅವರು ಪ್ರತಾಪ್ ಸಿಂಹ ಅವರ ವಿರುದ್ಧ ಪದೇ ಪದೇ ಸುದ್ದಿಗೋಷ್ಠಿ ನಡೆಸಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಾದ ಲಕ್ಷ್ಮಣ್ ಅವರು ಮೇಲಿಂದ ಮೇಲೆ ಸುದ್ದಿಗೋಷ್ಠಿ ನಡೆಸುವ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಇದು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಆರೋಪಗಳು ಪ್ರತಾಪ್ ಅವರ ವರ್ಚಸ್ಸಿಗೆ ಧಕ್ಕೆ ಮಾಡುವುದಲ್ಲದೇ ಅವರ ರಾಜಕೀಯ ಬದುಕಿಗೆ ಹಾನಿ ಆಗುತ್ತಿದೆ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾ.ಆರ್.ನಟರಾಜ್ ಅವರಿದ್ದ ಪೀಠ ಪ್ರತಾಪ್ ಸಿಂಹ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ಲಕ್ಷ್ಮಣ್‌ಗೆ ನಿರ್ಬಂಧಿಸಿದೆ.