ಅವಹೇಳನಕಾರಿ ಪೋಸ್ಟ್ | ಬಿ.ವೈ.ವಿಜಯೇಂದ್ರ ವಿರುದ್ಧದ ಎಫ್ಐಆರ್‌ಗೆ ಹೈಕೋರ್ಟ್ ತಡೆ
ಬೆಂಗಳೂರು : ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಬಿ.ವೈ.ವಿಜಯೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿ, ಅರ್ಜಿದಾರರು ಕಾನೂನು ಪಾಲಿಸುವ ನಾಗರೀಕರಾಗಿದ್ದಾರೆ. ಪ್ರಕರಣದಲ್ಲಿ ಆಡಳಿತಾರೂಢ ಕಾಂಗ್ರೇಸ್ ಪಕ್ಷದ ನೀತಿ ಟೀಕಿಸಲಾಗಿದ್ದು, ಇದು ಅಪಾರಾಧ ಎಸಗಿದಂತಲ್ಲ. ರಾಜಕೀಯ ದ್ವೇಷದ ಹಿನ್ನಲೆ ಆರೋಪ ಹೊರಿಸಲಾಗಿದೆ ಎಂದರು.
ಅಲ್ಲದೆ, ಒಂದೇ ಟ್ವೀಟ್‌ಗೆ ಕಾಂಗ್ರೆಸ್ ಮುಖಂಡ ರಮೇಶ್‌ಬಾಬು ಮತ್ತು ಚುನಾವಣಾ ಆಯೋಗ ಎಫ್ಐಆರ್ ದಾಖಲಿಸಿದೆ. ಈ ರೀತಿ ಒಂದೇ ಆರೋಪಕ್ಕೆ ಎರಡು ಎಫ್ಐಆರ್ ಹಾಕಿದ್ದು, ಕಾನೂನುಬಾಹಿರವಾಗಿದೆ. ಹೀಗಾಗಿ ಎಫ್ಐಆರ್ ರದ್ದುಗೊಳಿಸುವಂತೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಿ, ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ.