ಜಾತಿಗಣತಿ ವರದಿ ಸಲ್ಲಿಸಲು ಹಿಂ.ವರ್ಗಗಳ ಅಯೋಗಕ್ಕೆ ತಿಳಿಸಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2023-10-03 15:31 GMT

ಬೆಳಗಾವಿ, ಅ.3: ‘ಜಾತಿಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ಆಯೋಗ ವರದಿ ಸಲ್ಲಿಕೆ ಮಾಡಿದ ಬಳಿಕ ಅದನ್ನು ಪರಿಶೀಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ವರದಿ ತಯಾರು ಮಾಡಿದ್ದರು ಎಂದರು.

ವರದಿ ಸಲ್ಲಿಸಲು ಹೋದಾಗ ಕುಮಾರಸ್ವಾಮಿ ಸ್ವೀಕರಿಸಲಿಲ್ಲ. ಆಗಿನ ಕಾರ್ಯದರ್ಶಿಗಳು ವರದಿಗೆ ಸಹಿ ಮಾಡಿಲ್ಲ. ಈಗಿನ ಕಾರ್ಯದರ್ಶಿಗಳ ಬಳಿ ಸಹಿ ಮಾಡಿಸಿ ಅವರು ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ವಿವರಿಸಿದರು.

ಜಾತಿ ಗಣತಿ ಹಾಗೂ ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಬೇಕೆಂದು ನಾನೇ ಹಿಂದೆ ಆದೇಶ ಮಾಡಿದ್ದು. ಆಗ ಕಾಂತರಾಜು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ನಮ್ಮ ಸರಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ ಎಂದು ಅವರು ತಿಳಿಸಿದರು.

ನಂತರ ಸಮ್ಮಿಶ್ರ ಸರಕಾರ ಇರುವಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಪುಟ್ಟರಂಗಶೆಟ್ಟಿ ಇದ್ದರು. ಆಗ ವರದಿಯನ್ನು ಪಡೆಯಲಿಲ್ಲ. ನಂತರ ಆಯೋಗಕ್ಕೆ ಜಯಪ್ರಕಾಶ್ ಹೆಗಡೆಯನ್ನು ಬಿಜೆಪಿ ಸರಕಾರ ನೇಮಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News