ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ; ವಿಧೇಯಕ ಅಂಗೀಕಾರ

Update: 2024-02-21 17:57 GMT

Photo: X/@dubseatv

ಬೆಂಗಳೂರು : ರಾಜ್ಯದಲ್ಲಿ ಹುಕ್ಕಾ ಬಾರ್ ತೆರೆಯುವುದು ಅಥವಾ ನಡೆಸುವುದನ್ನು ನಿಷೇಧಿಸಲು ಅವಕಾಶ ಕಲ್ಪಿಸುವ 2024ನೆ ಸಾಲಿನ ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ(ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ)(ಕರ್ನಾಟಕ ತಿದ್ದುಪಡಿ) ವಿಧೇಯಕಕ್ಕೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.

ವಿಧೇಯಕದ ಕುರಿತು ಸದನದಲ್ಲಿ ವಿವರಣೆ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಉಪಹಾರ ಗೃಹ ಅಥವಾ ಪಬ್, ಬಾರ್, ರೆಸ್ಟೋರಂಟ್ ಸೇರಿದಂತೆ ಯಾವುದೇ ಸ್ಥಳದಲ್ಲಿ ಹುಕ್ಕಾ ಬಾರ್ ಗಳನ್ನು ತೆರೆಯುವುದಾಗಲಿ, ನಡೆಸುವುದಾಗಲಿ ಮಾಡುವಂತಿಲ್ಲ ಎಂದರು.

ಹುಕ್ಕಾ ಬಾರ್ ಗಳನ್ನು ನಿಷೇಧಿಸುವುದರ ಜೊತೆಗೆ, ಈ ಹಿಂದೆ ಇದ್ದ 18 ವರ್ಷದೊಳಗಿನವರಿಗೆ ಸಿಗರೇಟು ಅಥವಾ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡವುದನ್ನು ನಿಷೇಧಿಸಿದ್ದ ವಯೋಮಿತಿಯನ್ನು 21 ವರ್ಷಕ್ಕೆ ಏರಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಯಾವುದೆ ಶಿಕ್ಷಣ ಸಂಸ್ಥೆಯ100 ಮೀಟರ್ ಸುತ್ತಳತೆಯೊಳಗಿನ ಪ್ರದೇಶದೊಳಗೆ ಸಿಗರೇಟ್ ಅಥವಾ ಯಾವುದೇ ಇತರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಈ ನಿಬಂಧನೆಯನ್ನು ಉಲ್ಲಂಘಿಸಿದರೆ ಈ ಹಿಂದೆ ಇದ್ದಂತಹ 200 ರೂ.ಗಳ ದಂಡದ ಮೊತ್ತವನ್ನು ಒಂದು ಸಾವಿರ ರೂ.ಗಳಿಗೆ ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದರು.

ಹುಕ್ಕಾ ಬಾರ್ ನಿಷೇಧವನ್ನು ಉಲ್ಲಂಘಿಸಿದರೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, 50 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳವರೆಗೆ ಜುಲ್ಮಾನೆಯನ್ನು ವಿಧಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ಹುಕ್ಕಾ ಬಾರ್ ನಿಷೇಧಿಸುವ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ ಲಭಿಸಿತು. ಆರೋಗ್ಯ ಸಚಿವರ ಕ್ರಮಕ್ಕೆ ವಿರೋಧ ಪಕ್ಷದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News