ನಾನು ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡಿಲ್ಲ: ಡಿ.ಕೆ. ಶಿವಕುಮಾರ್
ಬೆಂಗಳೂರು: ‘ನಾನು ಸಿ.ಪಿ.ಯೋಗೇಶ್ವರ್ ಭೇಟಿ ಮಾಡಿಲ್ಲ, ಮಾತೂ ಆಡಿಲ್ಲ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗೆ ನೀಡಬೇಕಾದ ಗೌರವ ಕೊಟ್ಟಿದ್ದೇನೆ. ಅದರ ಹೊರತಾಗಿ ನಮ್ಮ ಮಧ್ಯೆ ಯಾವುದೇ ಭೇಟಿ, ಚರ್ಚೆ ನಡೆದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಣೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಎಚ್.ಡಿ. ಕುಮಾರಸ್ವಾಮಿಗೆ ಮಾಹಿತಿ ಇದ್ದರೆ ಮಾತನಾಡಿಕೊಳ್ಳಲಿ. ನನಗೂ ಬೇಕಾದಷ್ಟು ಮಾಹಿತಿಗಳಿವೆ. ಬೇರೆ ಪಕ್ಷದವರನ್ನು ಸಂಪರ್ಕಿಸುವ ಅವಶ್ಯಕತೆ ಸಧ್ಯಕ್ಕಿಲ್ಲ ಎಂದು ನಮ್ಮ ಪಕ್ಷದವರಿಗೂ ಹೇಳಿದ್ದೇನೆ. ಯೋಗೇಶ್ವರ್ ಪರಿಷತ್ ಸದಸ್ಯರು, ಚನ್ನಪಟ್ಟಣದಲ್ಲಿ ಶಾಸಕ ಸ್ಥಾನ ಖಾಲಿಯಾದಾಗಿನಿಂದ ನಾವು ಕೆಲಸ ಮಾಡಿಕೊಂಡು ಕಾರ್ಯಕರ್ತರನ್ನು ಸಜ್ಜುಮಾಡಿಕೊಂಡಿದ್ದೇವೆ’ ಎಂದರು.
ಕುಮಾರಸ್ವಾಮಿ ರಾಜಕಾರಣ ಅವರಿಗೇ ಗೊತ್ತು, ನಮಗೆ ಗೊತ್ತಿಲ್ಲ. ಅವರ ರಾಜಕೀಯವೇ ಬೇರೆ, ಅವರ ಪಕ್ಷ ಹಾಗೂ ಕಾರ್ಯಕರ್ತರ ರಾಜಕಾರಣವೇ ಬೇರೆ. ಎನ್‍ಡಿಎ ಮೈತ್ರಿ ರಾಜಕಾರಣವೇ ಬೇರೆ. ಕುಮಾರಸ್ವಾಮಿ ಮಾತಿಗೆ ಬದ್ಧವಾಗಿ ನಿಲ್ಲುವುದಿಲ್ಲ ಎಂದು ದೂರಿದ ಶಿವಕುಮಾರ್, ‘ಬಿಜೆಪಿ ಹಾಗೂ ಎನ್‍ಡಿಎ, ಕುಮಾರಸ್ವಾಮಿ, ಯೋಗೇಶ್ವರ್, ಜೆಡಿಎಸ್ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಐದು ವರ್ಷಗಳಿಂದ ಕುಮಾರಸ್ವಾಮಿ ಆಡಿರುವ ಮಾತುಗಳನ್ನು ನೋಡಿಕೊಂಡು ಬನ್ನಿ. ಅವರು ಎಂದಿಗೂ ತಮ್ಮ ಮಾತಿಗೆ ಬದ್ಧವಾಗಿ ನಿಂತಿಲ್ಲ. ಹೀಗಾಗಿ ಅವರ ನಿಲುವಿನ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
ಎಚ್‍ಡಿಕೆ ಸಾರ್ವಜನಿಕವಾಗಿ ಮಾತನಾಡುವುದೇ ಬೇರೆ, ಆಂತರಿಕವಾಗಿ ಬೇರೆ. ಆ ರೀತಿ ಮಾತನಾಡುವುದೇ ಅವರ ತಂತ್ರಗಾರಿಕೆ ಇರಬಹುದು. ಅದಕ್ಕೆ ನಾವು ಏಕೆ ತಲೆಕೆಡಿಸಿಕೊಳ್ಳಲಿ. ನಮ್ಮ ಕಾರ್ಯಕರ್ತರನ್ನು ಕರೆಸಿ ಯಾರೇ ನಿಂತರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸೂಚನೆ ನೀಡಿದ್ದೇವೆ. ಮುಂದಿನ ಮೂರುವರೆ ವರ್ಷ ಹಾಗೂ ನಂತರದ ಮುಂದಿನ ಸರಕಾರವೂ ನಾವೇ ಅಧಿಕಾರಕ್ಕೆ ಬರುವ ನಿರೀಕ್ಷೆ ಇದ್ದು, ಈ ಅವಧಿಯಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ನಾನು ಮೂರ್ಖನಲ್ಲ: ‘ಜೆಡಿಎಸ್ ದುರ್ಬಲ ಎಂದು ನಾನು ಭಾವಿಸಿದರೆ ನನ್ನಂತ ಮೂರ್ಖ ಯಾರು ಇಲ್ಲ. ಆದರೆ, ಕುಮಾರಸ್ವಾಮಿ ಇಷ್ಟು ದುರ್ಬಲರಾಗುತ್ತಾರೆಂದು ಭಾವಿಸಿರಲಿಲ್ಲ. ಕೇಂದ್ರ ಸಚಿವರಾಗಿರುವ ಅವರು ಎಲ್ಲರ ಕೈಕಾಲು ಕಟ್ಟಿಕೊಂಡು ನಮ್ಮ ಚಿಹ್ನೆಯಡಿ ಸ್ಪರ್ಧೆ ಮಾಡಿ ಎಂದು ಬಿಜೆಪಿಯವರಿಗೆ ಹೇಳುವಷ್ಟು ದುರ್ಬಲರಾಗಿದ್ದಾರೆ ಎಂದು ಭಾವಿಸಿರಲಿಲ್ಲ ಎಂದು ಶಿವಕುಮಾರ್ ಲೇವಡಿ ಮಾಡಿದರು.
ಉಪಚುನಾವಣೆ ಸಂಬಂಧ ಸಚಿವರ ಜತೆ ಚರ್ಚೆ ಮಾಡಿ ಅಭಿಪ್ರಾಯ ಪಡೆದಿದ್ದೇವೆ. ಚುನಾವಣಾ ಸಮಿತಿ ಸಭೆ ಬದಲು ಚುನಾವಣೆ ಉಸ್ತುವಾರಿಗಳ ಜತೆ ಚರ್ಚಿಸಿದ್ದೇವೆ. ಪಕ್ಷದ ಅಭ್ಯರ್ಥಿಗಳ ತೀರ್ಮಾನ ಆಗಿದೆ. ನಾವು ದಿಲ್ಲಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತದೆ: ಬಿಜೆಪಿ-ಜೆಡಿಎಸ್‍ನಲ್ಲಿ ಅನೇಕ ಗೊಂದಲಗಳಿವೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಚನ್ನಪಟ್ಟಣ ಸ್ವಾಭಾವಿಕವಾಗಿ ಜೆಡಿಎಸ್ ಕ್ಷೇತ್ರ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಆದರೆ, ಅವರು ಬಿಜೆಪಿಗೆ ಬಿಟ್ಟುಕೊಟ್ಟಿರುವ ಬಗ್ಗೆ ಮಾಧ್ಯಮಗಳ ವರದಿ ಬರುತ್ತಿವೆ. ಈ ಕ್ಷೇತ್ರ ಬಿಟ್ಟುಕೊಟ್ಟರೆ ಅವರು ಪಕ್ಷದ ಅಸ್ತಿತ್ವ ಕಳೆದುಕೊಂಡಂತಾಗುತ್ತದೆ. ಈಗಾಗಲೇ ಅವರ ಬಾಮೈದರನ್ನು ಬಿಜೆಪಿ ಚಿಹ್ನೆಯಡಿ ನಿಲ್ಲಿಸಿದ್ದಾರೆ. ಈಗ ಇದನ್ನೂ ಬಿಟ್ಟುಕೊಟ್ಟರೆ ಅವರು ಅಸ್ಥಿತ್ವ ಕಳೆದುಕೊಳ್ಳುತ್ತಾರೆ. ಇದು ಎಲ್ಲರಿಗೂ ಅರ್ಥವಾಗುವ ವಿಚಾರ. ಇದರಲ್ಲಿ ನಾವು ಏಕೆ ಹಸ್ತಕ್ಷೇಪ ಮಾಡೋಣ? ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಬೇಕೆಂದು ಶೇ.80ರಷ್ಟು ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ. ಹೈಕಮಾಂಡ್ ಯಾರನ್ನು ಕಣಕ್ಕಿಳಿಸುತ್ತಾರೆ, ಅವರ ಪರವಾಗಿ ಕೆಲಸ ಮಾಡಬೇಕೆಂದು ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದ್ದೇನೆ. ಲೋಕಸಭೆ ಚುನಾವಣೆ ಸೋಲಿನ ಆಘಾತದಿಂದ ನಾವಿನ್ನೂ ಹೊರಗೆ ಬಂದಿಲ್ಲ. ಸುರೇಶ್ ಅಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ. ಕಡಿಮೆ ಅಂತರದಲ್ಲಿ ಸೋತಿದ್ದರೆ ಒಂದು ಪಕ್ಷ ಸುಧಾರಿಸಿಕೊಳ್ಳಬಹುದಿತ್ತು. ಹೀಗಾಗಿ ನಾವು ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸೋತ ಮಾತ್ರಕ್ಕೆ ಜನರ ಸೇವೆಯನ್ನು ಬಿಡಲು ಆಗುವುದಿಲ್ಲ ಎಂದು ತಿಳಿಸಿದರು.