ಸಿಎಂಗೆ ರೈತರ ಬಗ್ಗೆ ಕಳಕಳಿ ಇದ್ದರೆ ವಕ್ಪ್ ಗೆಜೆಟ್ ನೋಟಿಫಿಕೇಶನ್ ರದ್ದುಪಡಿಸಲಿ: ಬಸವರಾಜ ಬೊಮ್ಮಾಯಿ

Update: 2024-11-03 06:25 GMT

ಬಸವರಾಜ ಬೊಮ್ಮಾಯಿ PC: fb.com

ಹುಬ್ಬಳ್ಳಿ: ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಪ್ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರಿಂದ ವಕ್ಪ್ ಆಸ್ತಿ ವಶಪಡಿಸಿಕೊಳ್ಳುವಂತೆ ವಕ್ಪ್ ಬೋರ್ಡ್ ಗೆ ಹೇಳಿದ್ದೆ ವಿನಹ ರೈತರ ಆಸ್ತಿಯನ್ನಲ್ಲಾ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ‌.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಪ್ ಸಚಿವ ಜಮೀರ್ ಅಹಮದ್ ಅವರು ನನ್ನ ಹಳೆಯ ವಿಡಿಯೊ ಬಿಡುಗಡೆ ಮಾಡಿ, ನಾನು ರೈತರ ಜಮೀನು ವಶಪಡಿಸಿಕೊಳ್ಳಲು ವಕ್ಪ್ ಗೆ ಹೇಳಿದ್ದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ‌. ನಾನು ವಕ್ಪ್ ಸಮಾರಂಭದಲ್ಲಿ ಮಾತನಾಡಿದ್ದೆ. ಆದರೆ ವಕ್ಪ್ ಬೋರ್ಡ್ ನ ಯಾವುದೇ ಸಭೆ ಮಾಡಿಲ್ಲ. ನಾನು ಅಂದು ಹೇಳಿರುವುದು ಅನ್ವರ್ ಮಾನಿಪ್ಪಾಡಿ ಅವರ ಸಮಿತಿ ವರದಿ ನೀಡಿದೆ.   ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರು ಮೋಸದಿಂದ ಎಷ್ಡೆಷ್ಟು ವಕ್ಪ್ ಆಸ್ತಿ ನುಂಗಿದ್ದಾರೆ ಎಂದು ಅನ್ವರ್ ಮಾನಿಪ್ಪಾಡಿ ವರದಿಯಲ್ಕಿ ಸ್ಪಷ್ಟವಾಗಿದೆ‌. ನಾವು ರೈತರಿಗೆ ಯಾವುದೇ ನೊಟಿಸ್ ಕೊಟ್ಟಿಲ್ಲ ರೈತರ ಜಮೀನು ವಶ ಪಡೆದುಕೊಂಡಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಕೊಟ್ಟಿರುವ ನೋಟೀಸ್ ವಾಪಸ್ ಪಡೆಯುವಂತೆ ಹೇಳಿರುವುದು ಕಣ್ಣೊರೆಸುವ ತಂತ್ರ. ನೋಟೀಸ್ ವಾಪಸ್ ಪಡೆದು ಚುನಾವಣೆ ಮುಗಿದ ನಂತರ ಮತ್ತೆ ನೋಟೀಸ್ ಕೊಡುವುದಿಲ್ಲ ಅನ್ನುವುದು ಏನ್ ಗ್ಯಾರೆಂಟಿ. ಅದರ ಬದಲು ವಕ್ಪ್ ನಲ್ಲಿ ಏನ್ ಗೆಜೆಟ್ ನೋಟಿಫಿಕೇಶ್ ಆಗಿದೆ ಅದನ್ನು ರದ್ದು ಮಾಡಬೇಕು. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ, ರೈತರ ಆಸ್ತಿ ಉಳಿಸಬೇಕೆಂದಿದ್ದರೆ ಅವರ ಮೇಲೆ ಗೌರವ ಇದ್ದರೆ, ಸಿಎಂ ಕೂಡಲೆ ವಕ್ಪ್ ಗೆಜೆಟ್ ನೊಟಿಫಿಕೇಶ್ ರದ್ದು ಮಾಡಬೇಕು. ಯಾವುದೇ ರೈತರಿಗೆ ನೋಟಿಸ್ ಕೊಡಬಾರದು ಎಂದು ಆಗ್ರಹಿಸಿದರು.

ನಮ್ಮ ಅವಧಿಯಲ್ಲಿ ಯಾವುದೋ ಮುಸಲ್ಮಾನರ ಹೆಸರಿನಲ್ಲಿದ್ದ ಆಸ್ತಿಯನ್ನು ಇನ್ಯಾರೊ ಕಬಳಿಸಿರುವುಕ್ಕೆ ನೊಟಿಸ್ ಕೊಟ್ಟಿರುತ್ತಾರೆ. ನಾವು ರೈತರಿಗೆ ಯಾವುದೇ ನೊಟಿಸ್ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News