ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯದಿದ್ದರೆ ಜೂ.17ಕ್ಕೆ ಬಿಜೆಪಿಯಿಂದ ಹೋರಾಟ : ಬಿ.ವೈ.ವಿಜಯೇಂದ್ರ
ಬೆಂಗಳೂರು: ರಾಜ್ಯ ಸರಕಾರ ಬರಗಾಲದ ಸಂಕಷ್ಟದ ಸಂದರ್ಭದಲ್ಲಿ ಜನರ ಮೇಲೆ ತೈಲ ಬೆಲೆ ಏರಿಕೆಯ ಹೊರೆ ಹಾಕಿರುವುದು ಅಕ್ಷಮ್ಯ ಅಪರಾಧ. ಸಿಎಂ ತಮ್ಮ ಭಂಡತನವನ್ನು ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಜೂ.17ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ಗ್ಯಾರಂಟಿಗಳನ್ನು ಈಡೇರಿಸಲು ಆಗದೆ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಸರಕಾರವು, ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ 3 ರೂ., ಡೀಸೆಲ್ ದರವನ್ನು 3.50 ರೂ.ಗೆ ಏರಿಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ಸೋಲಿನ ಹತಾಶೆ ಇದ್ದರೆ, ಇನ್ನೊಂದೆಡೆ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಭಂಡ ಸರಕಾರ ಮತ್ತು ಮುಖ್ಯಮಂತ್ರಿ ಇದನ್ನು ಒಪ್ಪಿಕೊಳ್ಳುವುದಿಲ್ಲ. ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಒಂದೆಡೆ ಹೇಳುತ್ತಾರೆ. ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಸಿರುವುದು ಹಣಕಾಸಿನ ಪರಿಸ್ಥಿತಿ ಹದಗೆಟ್ಟಿರುವುದನ್ನು ತಿಳಿಸುತ್ತದೆ. ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದ ಕೆಟ್ಟ ಸ್ಥಿತಿಯಲ್ಲಿ ಈ ಸರಕಾರ ಇದೆ ಎಂದು ವಿಜಯೇಂದ್ರ ಹೇಳಿದರು.
ಲೋಕಸಭಾ ಚುನಾವಣೆಯ ಸೋಲಿನ ಸಿಟ್ಟನ್ನು ಕಾಂಗ್ರೆಸ್ ಸರಕಾರ ಜನರ ಮೇಲೆ ತೋರಿಸುತ್ತಿದೆ. ಹಿಂದೆ ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿದ್ದರು. ಇದರ ಬಗ್ಗೆ ನಾವು ವಿಧಾನಸಭೆ ಒಳಗೆ ಮತ್ತು ಹೊರಗಡೆ ಹೋರಾಟ ಮಾಡಿದ್ದೇವೆ. ವಿದ್ಯುತ್ ದರವನ್ನೂ ಏರಿಸಿದ್ದರು. ಈ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರದ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಿದೆ. ರಾಜ್ಯ ಸರಕಾರವು ಕೆಲವು ಅಧಿಕಾರಿಗಳನ್ನು ಬಂಧಿಸಿ 10 ಕೋಟಿ ರೂ.ಸಿಕ್ಕಿದೆ, 3 ಕೋಟಿ ರೂ.ಸಿಕ್ಕಿದೆ ಎಂದು ತೇಪೆ ಹಚ್ಚಿ ಪ್ರಕರಣವನ್ನು ಸಂಪೂರ್ಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಜೂ.18ರಂದು ಈ ಸಂಬಂಧ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಲಾಗುವುದು. 28ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ವಿಜಯೇಂದ್ರ ಹೇಳಿದರು.