ಗುಣಮಟ್ಟದ ಚಿತ್ರಗಳು ತೆರೆ ಮೇಲೆ ಬಂದರೆ ಸಮಾಜಕ್ಕೆ ಉಪಯುಕ್ತ: ದಸರಾ ಚಲನಚಿತ್ರೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ

Update: 2023-10-15 13:05 GMT

ಮೈಸೂರು,ಅ.15: ಚಲನಚಿತ್ರ ಬಹಳ ಪ್ರಭಾವ ಇರುವಂತಹ ಮಾಧ್ಯಮವಾಗಿದ್ದು, ಗುಣಮಟ್ಟದ ಚಿತ್ರಗಳು ತೆರೆ ಮೇಲೆ ಬಂದರೆ ಸಮಾಜಕ್ಕೆ ಉಪಯುಕ್ತವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಿಸಿದರು.

ಕರ್ನಾಟಕ ಕಲಾಮಂದಿರದಲ್ಲಿ ರವಿವಾರ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಲನಚಿತ್ರ ಪ್ರೇಮಿಗಳಿಗೆ ಇದೊಂದು ಸುವರ್ಣ ಅವಕಾಶ. 7 ದಿನಗಳ ಕಾಲ ನಗರದ ಐನಾಕ್ಸ್ ಮತ್ತು ಡಿ ಆರ್ ಸಿ ಮಾಲ್ ನಲ್ಲಿ ಉತ್ತಮ್ಮ ಚಲನ ಚಿತ್ರಗಳು ಪ್ರದರ್ಶನ ಆಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಚಲನಚಿತ್ರಗಳ ಮೂಲಕ ಜನತೆಗೆ ಉತ್ತಮ ಸಂದೇಶ ನೀಡುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಚಲನಚಿತ್ರಗಳ ಮೂಲಕ ನಾಡಿಗೆ ತಿಳಿಸುವಂತಹ ಕೆಲಸ ಮಾಡುತ್ತಾ ಬರುತ್ತಿದೆ. ಸರ್ಕಾರದ ವತಿಯಿಂದ ಗುಣಮಟ್ಟದ ಚಿತ್ರ ನೀಡುವ ಎಲ್ಲಾ ಚಿತ್ರರಂಗದವರಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ ಎಂದು ಹೇಳಿದರು.

ಕನ್ನಡದ ಖ್ಯಾತ ಹಾಸ್ಯನಟ ನರಸಿಂಹರಾಜು ಅವರ ಜನ್ಮದಿನದ ಪ್ರಯುಕ್ತ ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಅವರಿಗೆ ಸನ್ಮಾನ ಮಾಡುವುದರ ಜೊತೆಗೆ ನರಸಿಂಹ ರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.

ಇದೇ ಸಮಯದಲ್ಲಿ ಚಲನಚಿತ್ರೋತ್ಸವದ ವಿಶೇಷ ಮಾಹಿತಿಗಳನ್ನೊಳಗೊಂಡ ಕಿರು ಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಖ್ಯಾತ ಚಿತ್ರನಟ ಡಾರ್ಲಿಂಗ್ ಕೃಷ್ಣರವರು ಮೈಸೂರಿನ ಚಲನಚಿತ್ರೋತ್ಸವ ದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ನನ್ನ ಊರು ಮೈಸೂರು ಆದಕಾರಣ ನನ್ನ ಕಲೆಗೆ ಮೈಸೂರು ಅತ್ಯುತ್ತಮ ವೇದಿಕೆಯನ್ನು ಮಾಡಿಕೊಟ್ಟಿತ್ತು. ನನಗಷ್ಟೇ ಅಲ್ಲದೆ ಹಲವು ಕಲೆಗಾರರಿಗೆ ಮೈಸೂರಿನ ದಸರಾ ಉಪಯುಕ್ತವಾಗಿದೆ ಹಾಗೂ ಸಿನಿಮಾಗಳು ಕೇವಲ ಮನರಂಜನೆ ಅಷ್ಟೇ ಅಲ್ಲದೆ ಸಮಾಜ ಉತ್ತಮ ಸಂದೇಶ ನೀಡುತ್ತಾ ಬಂದಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಹಾಪೌರ ಶಿವಕುಮಾರ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕರಾದ ಎ.ಅರ್.ಕೃಷ್ಣಮೂರ್ತಿ, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ಶ್ರೀವತ್ಸ, ಚಿತ್ರನಟ ನಟಿಯರಾದ ಮಿಲನ ನಾಗರಾಜ್, ಸುಧಾ ನರಸಿಂಹರಾಜು,‌ ಮಾನ್ವಿತ ಕಾಮತ್ , ವೈಭವಿ ಶಾಂಡಿಲ್ಯ, ಮಯೂರಿ ಸೇರಿದಂತೆ ಇತರರು ಹಾಜರಿದ್ದರು.

ಮುಂದಿನ ದಿನಗಳಲ್ಲಿ ಎಲ್ಲರಿಗೂ ಹತ್ತು ಕೆ.ಜಿ.ಅಕ್ಕಿ ವಿತರಣೆ: ಆಹಾರ ಸಚಿವ ಕೆ.ಎಚ್.ಮುನಿಯಪ್ಪ

ಮೈಸೂರು,ಅ.15: ಅನ್ನ ಭಾಗ್ಯ ಯೋಜನೆ ಜಾರಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಹತ್ತು ಕೆ.ಜಿ. ಅಕ್ಕಿಯನ್ನು ಎಲ್ಲರಿಗೂ ವಿತರಣೆ ಮಾಡಲಿದ್ದೇವೆ ಎಂದು ಆಹಾರ ಮತ್ತು ನಾಗರೀಪ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಮೈದಾನದಲ್ಲಿ ರವಿವಾರ ದಸರಾ ಆಹಾರ ಮೇಳ ಉದ್ಘಾಟಿಸಿ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹತ್ತು ಕೆ.ಜಿ.ಅಕ್ಕಿ ನೀಡಲು ತೀರ್ಮಾನಿಸಿದ್ದು ಆಂಧ್ರ, ಚತ್ತೀಸ್ ಗಡ, ಪಂಜಾಬ್, ಹರಿಯಾಣದಲ್ಲಿ ಅಕ್ಕಿ ಖರೀದಿಸಲು ಮುಂದಾಗಿದ್ದು ಈ ಸಂಬಂಧ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

1.8 ಲಕ್ಷ ಕುಟುಂಬಗಳ 4 ಕೋಟಿ ಜನರಿಗೆ ಅಕ್ಕಿ ನೀಡಲಾಗಿದೆ. 5% ಕೆಲವರಿಗೆ ಸಿಕ್ಕಿರದಿರಬಹುದು. ಕೆಲವು ಕಡೆಗಳಲ್ಲಿ ಸರ್ವರ್ ತೊಂದರೆಯಿಂದ ಇನ್ನು ಕೆಲವುಕಡೆಗಳಲ್ಲಿ ಕಾಡ್ ೯ ಸಬ್ ಮಿಟ್ ಮಾಡದೆ ಇರುವವರಿಗೆ ಅಕ್ಕಿ ಸಿಕ್ಕಿಲ್ಲ. ಮುಂದೆ ಅವರಿಗೂ ಸಿಗಲಿದೆ ಎಂದು ಹೇಳಿದರು.

ಐಟಿ ದಾಳಿ ಯಿಂದ ಸಿಕ್ಕಿರುವ 40 ಕೋಟಿ ಮಾಲೀಕ ಗುತ್ತಿಗೆದಾರ ಜೊತೆಗೆ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಇದಕ್ಕೆ ದಾಖಲೆಯನ್ನು ನಾನೇ ಐಟಿ ಅಧಿಕಾರಿಗಳಿಗೆ ನೀಡುತ್ತೇನೆ ಎಂದ ಮೇಲೆ ವಿರೋಧ ಪಕ್ಷದವರಿಗೆ ಯಾಕೆ ಗೊಂದಲ ಎಂದು ಪ್ರಶ್ನಿಸಿದರು.

ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಮೈಸೂರಿಗೆ ಪ್ರವಾಸಿಗರು ಆಗಮಿಸುತ್ತಾರೆ. ಆಹಾರ ಮೇಳದಲ್ಲಿ ವಿವಿಧ ರಾಜ್ಯ, ಮತ್ತು ದೇಶಗಳ ಖಾಧ್ಯವನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. 150 ಆಹಾರ ಮಳಿಗೆಗಳಿದ್ದು ಎಲ್ಲರೂ ಆಹಾರವನ್ನು ಸವಿಯಬೇಕು ಎಂದು ಮನವಿ ಮಾಡಿದರು.

ಆಹಾರವನ್ನು ಯಾರೂ ಬಿಸಾಕ ಬಾರದು, ಆಹಾರದ ತಯಾರಿಕೆಯಲ್ಲಿ ಮೂರನೇ ಒಂದು ಭಾಗವನ್ನು ವೇಸ್ಟ್ ಮಾಡಲಾಗುತ್ತಿದೆ. ಅದೇ ಆಹಾರ ಇದ್ದರೆ ಅನ್ನ ಇಲ್ಲದವರಿಗೆ ನೀಡಬಹುದು. ಹಾಗಾಗಿ ಯಾರೂ ಆಹಾರವನ್ನು ವೇಸ್ಟ್ ಮಾಡಬಾರದು ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News