ಕೇಂದ್ರ ಸರಕಾರ ಮಾರ್ಗಸೂಚಿ ಸಡಿಲಗೊಳಿಸದಿದ್ದರೆ, ಬರ ಪೀಡಿತ ಪ್ರದೇಶ ಘೋಷಣೆ: ಸಚಿವ ಚಲುವರಾಯಸ್ವಾಮಿ
ಬೆಂಗಳೂರು, ಆ. 17: ಕೇಂದ್ರ ಸರಕಾರವೂ ಬರ ಘೋಷಣೆಯ ಮಾರ್ಗಸೂಚಿ ಸಡಿಲ ಮಾಡದಿದ್ದರೆ ಈಗಿರುವ ಮಾರ್ಗಸೂಚಿ ಪ್ರಕಾರವೇ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಬೇಕಾಗುತ್ತದೆ’ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಗುರುವಾರ ನಗರದ ಕೃಷಿ ಇಲಾಖೆ ಆಯುಕ್ತಾಲಯದಲ್ಲಿ ರೈತರಿಗೆ ಮಾಹಿತಿ ಸಲಹೆ,ಮಾರ್ಗದರ್ಶನ ನೀಡುವ ಉದ್ದೇಶದಿಂದ ಸ್ಥಾಪಿಸಿರುವ ಏಕೀಕೃತ ಸಹಾಯವಾಣಿ ಕರೆ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಬರ ಘೋಷಣೆಯ ಮಾರ್ಗಸೂಚಿ ಸಡಿಲ ಮಾಡಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಒಂದು ವೇಳೆ, ಸಡಿಲ ಮಾಡದೆ ಇದ್ದಲ್ಲಿ ಹಳೆಯ ಮಾರ್ಗಸೂಚಿ ಪ್ರಕಾರವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕಾಗುತ್ತದೆ. ಸದ್ಯ ಈಗಿರುವ ಮಾರ್ಗಸೂಚಿ ಪ್ರಕಾರ ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆ ಇದ್ದು, ಸತತ ಮೂರು ವಾರಗಳ ಕಾಲ ಒಣಹವೆ ಇರಬೇಕು ಎಂದಿದೆ. ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆ ಇರುವುದನ್ನು ಶೇ.30ಕ್ಕೆ ಇಳಿಸಲು ಕೇಂದ್ರ ಸರಕಾರವನ್ನು ಕೋರಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಎರಡು ವಾರಗಳಿಂದ ಮುಂಗಾರು ದುರ್ಬಲಗೊಂಡಿದೆ. ಆದರೂ ಕುಡಿಯುವ ನೀರಿಗೆ ತೊಂದರೆಯಿಲ್ಲ. ಗ್ರಾಮೀಣಾಭಿವೃದ್ದಿ ಮತ್ತು ಕಂದಾಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದ ಅವರು, ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದೆ. ಈಗಾಗಲೇ 61.72 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಾಕಷ್ಟು ದಾಸ್ತಾನು ಇದ್ದು ರೈತರಿಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ಉಲ್ಲೇಖಿಸಿದರು.
ಇನ್ನೂ, ಕೃಷಿ ಭಾಗ್ಯ ಯೋಜನೆಯಡಿ 100 ಕೋಟಿ ರೂ. ಕೃಷಿ ನವೋದ್ಯಮ ಯೋಜನೆಯಡಿ 10 ಕೋಟಿ, ಆಧುನಿಕ ಕಟಾವು ಯಂತ್ರಗಳ ಕೇಂದ್ರದ ಸ್ಥಾಪನೆಗೆ 50 ಕೋಟಿ ರೂ.ಗಳನ್ನು ಪ್ರಸಕ್ತ ಸಾಲಿನಲ್ಲಿ ಒದಗಿಸಲಾಗಿದೆ. ಅಲ್ಲದೆ 100 ಹೈಟೆಕ್ ಹಾರ್ವೆಸ್ಟರ್ ಹಬ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸಿರಿಧಾನ್ಯಗಳಿಗೂ ಪ್ರೋತ್ಸಾಹ ನೀಡುವ ರೈತ ಸಿರಿ ಯೋಜನೆ ಮುಂದುವರೆಸಲಾಗಿದೆ ಎಂದು ಸಚಿವರು ಹೇಳಿದರು.