ಲಿಂಗಾಯತ ಸಮಾಜಕ್ಕೂ ಕುರುಬ ಸಮಾಜಕ್ಕೂ ಅವಿನಾಭಾವ ಸಂಬಂಧ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Inseparable relationship between Lingayat society and Kuruba society: Minister Lakshmi Hebbalkar
ಬೆಳಗಾವಿ: ʻʻಎಲ್ಲಿ ಸಂಗೊಳ್ಳಿ ರಾಯಣ್ಣ ಇರುತ್ತಾನೋ ಅಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಇರುತ್ತಾಳೆ. ಎಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಇರುತ್ತಾಳೋ ಅಲ್ಲಿ ಸಂಗೊಳ್ಳಿ ರಾಯಣ್ಣ ಇರುತ್ತಾನೆ. ಹಾಗಾಗಿ ಲಿಂಗಾಯತ ಸಮಾಜಕ್ಕೂ ಕುರುಬ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರೇ ಸಂಗೊಳ್ಳಿ ರಾಯಣ್ಣʻʻ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಅವರು ಇಂದು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ನ 9ನೇ ವಾರ್ಷಿಕ ರಾಷ್ಟ್ರೀಯ ಪ್ರತಿನಿಧಿಗಳ ಮಹಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.
ʻʻಈ ಸಮಾವೇಶ ಬೆಳಗಾವಿಯಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ. ಸಮಾವೇಶಕ್ಕ ಸಹಕಾರ ನೀಡಬೇಕೆಂದು ಸಮಾಜದ ಮುಖಂಡರು ಮನೆಗೆ ಬಂದು ಹೇಳಿದಾಗ, ಇದು ನನ್ನ ಭಾಗ್ಯ ಎಂದು ಅವರೊಂದಿಗೆ ಕೈ ಜೋಡಿಸಿದೆ. ಸಮಾಜದಲ್ಲಿ ಯಾವುದೇ ಶುಭ ಕಾರ್ಯ ನಡೆಯಲಿ ಕುರುಬ ಸಮಾಜದವರಿಂದಲೇ ಆರಂಭ ಮಾಡಿಸುವ ರೂಢಿ ಇದೆ. ಆದ್ದರಿಂದ ಕುರುಬ ಸಮಾಜದವರದು ಅಮೃತ ಹಸ್ತ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತ್ಯತೀತ ತತ್ವದ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಅವರು ಕೇವಲ ಕುರುಬರ ಕಣ್ಮಣಿ ಅಲ್ಲ, ಸಮಸ್ತ ಸಮಾಜದ, ಸಮಸ್ತ ಕನ್ನಡಿಗರ ಕಣ್ಮಣಿ. ಪಕ್ಷಾತೀತವಾಗಿ ಅವರಿಗೆ ಅಭಿಮಾನಿಗಳಿರುವುದು ಹೆಮ್ಮೆಯ ವಿಷಯʻʻ ಎಂದು ನುಡಿದರು.
ʻʻಸಿದ್ದರಾಮಯ್ಯ ನನಗೆ 3 ಬಾರಿ ಬಿ ಫಾರ್ಮ್ ನೀಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಎಂದು ತಲೆಯ ಮೇಲೆ ಕೈ ಇಟ್ಟು ಆಶಿರ್ವದಿಸಿದ್ದಾರೆ. ನನ್ನಂತ ಸಾವಿರಾರು ಜನರನ್ನು ಬೆಳೆಸಿದ್ದಾರೆ. ಅವರಿಂದ ಕಲಿಯಬೇಕಾದದ್ದು ಇನ್ನೂ ಬಹಳಷ್ಟಿದೆ.ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದ್ದೇವೆ. ಜಾತ್ಯತೀತವಾಗಿ, ಪಕ್ಷಾತೀತವಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಒಳ್ಳೆಯ ಕೆಲಸ ಮಾಡಿದ್ದಕ್ಕೇ ಅವರು 14 ಬಾರಿ ಬಜೆಟ್ ಮಂಡಿಸಿದ್ದಾರೆ. ಸಮಾಜದ ದೃವತಾರೆಯಾಗಿರುವ ಸಿದ್ದರಾಮಯ್ಯ ಹೀಗೇ ಬೆಳೆಯಬೇಕೆನ್ನುವುದು ಎಲ್ಲ ಸಮಾಜಗಳ ಆಶಯʻʻ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.