ನಿರ್ವಾಹಕನ ಕೆಲಸ ಮಾಡಿದ್ದ ಕ್ಲೀನರ್‌ಗೆ ವಿಮೆ ಪರಿಹಾರ ; ಹೈಕೋರ್ಟ್ ಆದೇಶ

Update: 2023-11-17 16:12 GMT

PHOTO: PTI 

ಬೆಂಗಳೂರು, ನ.17: ಖಾಸಗಿ ಬಸ್ ನಿರ್ವಾಹಕ ಫುಟ್‍ಬೋರ್ಡ್‍ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾ ಕಂಪೆನಿ ಪರಿಹಾರ ಮೊತ್ತವನ್ನು ನೀಡಬೇಕೆಂದು ಹೈಕೋರ್ಟ್ ಆದೇಶಿಸಿದೆ.

ಖಾಸಗಿ ಬಸ್‍ವೊಂದರ ಮಾಲಕ ಟಿ.ಶಾಂತಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದೆ.

ಮೃತಪಟ್ಟ ವ್ಯಕ್ತಿ ಬಸ್ ಕ್ಲೀನರ್ ಆಗಿದ್ದು ಅವರು ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ವಿಮಾ ಕಂಪೆನಿ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಅಪಘಾತ ನಡೆದ ದಿನದಂದು ನಿರ್ವಾಹಕನ ಕೆಲಸವನ್ನು ಮೃತನು ನಿರ್ವಹಿಸುತ್ತಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ಹೇಳಿತು.

8.58 ಲಕ್ಷ ರೂ. ಪರಿಹಾರ ಪಾವತಿಯ ಹೊಣೆಯನ್ನು ಬಸ್ ಮಾಲಕನಿಗೆ ಹೊರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿ, ವಿಮಾ ಕಂಪೆನಿಯೇ ಮೃತನ ಕುಟುಂಬದವರಿಗೆ ಪರಿಹಾರ ಪಾವತಿಸಬೇಕು ಎಂದು ತಿಳಿಸಿದೆ.

ಮೂಡಿಗೆರೆ ತಾಲೂಕಿನ ಪೀಲಾಪುರ ಗೇಟ್ ಬಸ್ ನಿಲ್ದಾಣದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ ಹಿನ್ನೆಲೆಯಲ್ಲಿ ಫುಟ್‍ಬೋರ್ಡ್‍ನಲ್ಲಿ ನಿಂತಿದ್ದ ನಿರ್ವಾಹಕ ಕೆಳಗೆ ಬಿದ್ದಿದ್ದಾನೆ. ಈ ವೇಳೆ ತಲೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾನೆ. ಹೀಗಾಗಿ, ಪ್ರಕರಣದಲ್ಲಿ ವಿಮಾ ಕಂಪೆನಿಯೇ ಮೃತನ ಕುಟುಂಬವರಿಗೆ ಪರಿಹಾರ ಪಾವತಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.

ಪ್ರಕರಣವೇನು?: ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ನಿವಾಸಿ ಟಿ.ಶಾಂತಕುಮಾರ್ ಎಂಬವರು ಖಾಸಗಿ ಬಸ್‍ವೊಂದರ ಮಾಲಕರಾಗಿದ್ದಾರೆ. ಆ ಬಸ್‍ನಲ್ಲಿ ಲೋಹಿತ್ ಕುಮಾರ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. 2018ರ ಫೆ.5 ರಂದು ಪೀಲಾಪುರ ಗೇಟ್ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಸ್‍ನ ಫುಟ್‍ಬೋರ್ಡ್‍ನಲ್ಲಿ ನಿಂತಿದ್ದ ಲೋಹಿತ್ (35), ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಲೋಹಿತ್ ತಾಯಿ ಮತ್ತು ಸಹೋದರ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಲೋಹಿತ್ ಬಸ್ಸಿನ ಕಂಡಕ್ಟರ್ ಅಲ್ಲ, ಅವರು ಕೇವಲ ಕ್ಲೀನರ್ ಆಗಿದ್ದು, ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡುವುದಿಲ್ಲ. ಬಸ್ ಮಾಲಕರು ವಿಮಾ ಪಾಲಿಸಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಬಸ್ಸಿಗೆ ವಿಮಾ ಸೌಲಭ್ಯ ಕಲ್ಪಿಸಿದ್ದ ಕಂಪೆನಿ ವಾದಿಸಿತ್ತು.

ಅದನ್ನು ಪರಿಗಣಿಸಿದ್ದ ಮೋಟಾರು ವಾಹನಗಳ ಪರಿಹಾರ ನ್ಯಾಯಾಧೀಕರಣ, ಬಸ್‍ನ ಕ್ಲೀನರ್  ಅಪಾಯವನ್ನು ವಿಮಾ ಪಾಲಿಸಿಯಲ್ಲಿ ಒಳಗೊಂಡಿಲ್ಲ. ವಿಮಾ ಪಾಲಿಸಿಯ ನಿಯಮಗಳನ್ನು ಬಸ್ ಮಾಲಕರು ಉಲ್ಲಂಘಿಸಿದ್ದಾರೆ. ಹೀಗಾಗಿ, ಅವರೇ ಮೃತನ ಸಾವಿಗೆ ಪರಿಹಾರ ಪಾವತಿಸಲು ಜವಾಬ್ದಾರಿಯಾಗಿದ್ದು, ಮೃತ ಲೋಹಿತ್ ಅವರ ತಾಯಿ ಮತ್ತು ಸಹೋದರನಿಗೆ 8,58,500 ರೂ. ಪರಿಹಾರ ಪಾವತಿಸಬೇಕು ಎಂದು 2019ರ ಆ.6 ರಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಮೆಲ್ಮನವಿ ಸಲ್ಲಿಸಿದ್ದ ಶಾಂತಕುಮಾರ್, ಮೃತ ಲೋಹಿತ್ ಬಸ್ಸಿನಲ್ಲಿ ಕಂಡಕ್ಟರ್ ಆಗಿದ್ದರು. ಈ ಅಂಶವನ್ನು ನ್ಯಾಯಾಧೀಕರಣ ಪರಿಗಣಿಸಿಲ್ಲ. ವಿಮಾ ಪಾಲಿಸಿಯ 28ನೇ ಷರತ್ತಿನ ಅನ್ವಯ ಪಾಲಿಸಿ ವ್ಯಾಪ್ತಿಗೆ ಬಸ್ ಚಾಲಕ, ನಿರ್ವಾಹಕ ಮತ್ತು ಕ್ಲೀನರ್ ಒಳಪಡುತ್ತಿದ್ದರು. ಹೀಗಾಗಿ, ಮೃತನ ಕುಟುಂಬದವರಿಗೆ ಪರಿಹಾರ ಪಾವತಿಸುವ ಹೊಣೆ ವಿಮಾ ಕಂಪೆನಿಯದ್ದಾಗಿದೆ ಎಂದು ವಾದಿಸಿದ್ದರು. ಈ ವಾದವನ್ನು ವಿಮಾ ಕಂಪೆನಿ ಅಲ್ಲಗೆಳೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News