ಅವರದ್ದು ಸಮಾನ ದುಖಃಸ್ಥರ ಸಭೆ: ಸಿ.ಎಂ. ಇಬ್ರಾಹಿಂಗೆ ಟಿ.ಎ ಶರವಣ ತಿರುಗೇಟು
ಬೆಂಗಳೂರು, ಅ.17-ಸಮಾನ ಮನಸ್ಕರ ಚಿಂತನ-ಮಂಥನ ಸಭೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷರು ನಡೆಸಿದ್ದು, ಅದು ಸಮಾನ ದುಖಃಸ್ಥರ ಸಭೆ ಎಂದೆನಿಸತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂತನ- ಮಂಥನ ಸಭೆಯಲ್ಲಿ ಪಕ್ಷದ ವರಿಷ್ಠರು ಇರಬೇಕಾಗಿತ್ತು. ಇದನ್ನು ಪಕ್ಷದ ವೇದಿಕೆ ಎಂದು ಕರೆಯಬಹುದೇ ಎಂದು ಪ್ರಶ್ನಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ..ದೇವೇಗೌಡರು ಚಿಂತನ- ಮಂಥನ ಸಭೆಗೆ ಅನುಮತಿ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು. ದೇವೇಗೌಡರ ಕಣ್ಮುಂದೆ ಇರುವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು. ಕಷ್ಟದ ಸಮಯದಲ್ಲಿ ನಾವು ಜೊತೆಯಲ್ಲಿ ಇದ್ದೇವೆ. ಮುಂಬರುವ ಲೋಕಸಭಾ ಚುನಾವಣೆಗೆ ಏನು ಮಾಡಬೇಕು ಎಂಬ ಚರ್ಚೆಯಲ್ಲಿ ಇದ್ದೇವೆ ಎಂದು ಹೇಳಿದರು.
ರಾಜ್ಯಾಧ್ಯಕ್ಷರು ನಡೆಸಿರುವ ಸಭೆ ವಿಚಾರವಾಗಿ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಪಕ್ಷದ ವರಿಷ್ಠರು ಮೈತ್ರಿಗೂ ಮುನ್ನ ಸಭೆ ಕರೆದು ಚರ್ಚಿಸಿದ್ದಾರೆ. ಮೈತ್ರಿ ಬಗ್ಗೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ. ನಾವೆಲ್ಲಾ ಒಪ್ಪಿದ ಮೇಲೆಯೇ ಅವರು ಮುಂದುವರೆದಿದ್ದು. ಒಳಗೊಂದು ಹೊರಗೊಂದು ಮಾತಾಡೋದು ಸರಿಯಲ್ಲ. ಅವರು ಕೂಡ ಹಿರಿಯರಿದ್ದಾರೆ ಎಂದು ಅವರು ಹೇಳಿದರು.
ಪ್ರತಿಯೊಂದು ಹೆಜ್ಜೆಯನ್ನು ನಮ್ಮ ಹಿರಿಯರು ಗಮನಿಸುತ್ತಿದ್ದಾರೆ, ಯಾರು ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ, ಯಾರು ನಕಲಿ ಎಂದು. ನಮ್ಮ ಹಿರಿಯರ ಗುರಿ ಏನೆಂದರೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ನಾಡಿನ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು. ಅದಕ್ಕಾಗಿ ಸಭೆ ಸಂಘಟನೆಗಳನ್ನು ಮಾಡಿ ರಾಜ್ಯದ ಎಲ್ಲೆಡೆ ಪಕ್ಷದ ಬಲವರ್ಧನೆಗಾಗಿ ದುಡಿಯುತ್ತಿದ್ದಾರೆ ಈ ಒಂದು ಕಷ್ಟದ ಸಮಯದಲ್ಲಿ ನಾವೆಲ್ಲ ಅವರೊಂದಿಗೆ ಇದ್ದೇವೆ ಎಂದು ತಿಳಿಸಿದರು.
ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ಯಾವ ರೀತಿಯಲ್ಲಿ ಪಕ್ಷವನ್ನು ಸಂಘಟಿಸಬೇಕು ಅದರ ಬಗ್ಗೆ ನಾವು ಚಿಂತಿಸುತ್ತಿದ್ದೇವೆ, ಅದರ ಬದಲು ಇಂಥ ಚಿಂತನ ಮಂಥನ ಅಥವಾ ದುಃಖದ ಸಭೆಯ ಬಗ್ಗೆ ನಮಗೆ ಆಸಕ್ತಿ ಇಲ್ಲವೆಂದು ಈ ವೇಳೆ ತಿಳಿಸಿದರು.
ʼಇಳಿಯ ವಯಸ್ಸಿನಲ್ಲಿ ಪಕ್ಷದ ಸಂಘಟನೆಗಾಗಿ ಪಕ್ಷದ ಉಳಿವಿಗಾಗಿ ಶ್ರಮಿಸುತ್ತಿರುವಎಚ್ ಡಿ ದೇವೇಗೌಡ ಅವರಿಗೆ ಯಾವುದೇ ರೀತಿಯ ನೋವನ್ನು ನೀಡಬಾರದು ಎಂದು ಈ ವೇಳೆ ಮನವಿ ಮಾಡಿಸ ಅವರು, ಪಕ್ಷದ ಉಳಿವಿಗಾಗಿ ನಾಡಿನ ಸೇವೆಗಾಗಿ ಹೋರಾಡುತ್ತಿರುವ ದೇವಗೌಡ ಅಪ್ಪಾಜಿ ಹಾಗೂ ಕುಮಾರಸ್ವಾಮಿಯವರಿಗೆ ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕು ಅವರಿಗೆ ಸಹಕರಿಸಬೇಕುʼ ಎಂದು ತಿಳಿಸಿದರು.