ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟಿಸುತ್ತಿರುವುದು ವಿಪರ್ಯಾಸ: ಬಸವರಾಜ ಬೊಮ್ಮಾಯಿ

Update: 2024-06-25 06:27 GMT

Photo:fb.com/basavarajbommai

ಹೊಸದಿಲ್ಲಿ, ಜೂ.25: ಕಳೆದ ಐವತ್ತು ವರ್ಷಗಳಲ್ಲಿ ಪ್ರಜಾಪ್ರಭುತ್ವ ಬಹಳಷ್ಟು ಗಟ್ಟಿಯಾಗಿದೆ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ತಿರುಚಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಕಾಂಗ್ರೆಸ್ ಸಂಸತ್ತಿನಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ ಮಾಡಿರುವುದು ವಿಪರ್ಯಾಸ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಐವತ್ತು ವರ್ಷಗಳ ಹಿಂದೆ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು, ಇದೊಂದು ಕರಾಳ ದಿನ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಪಧಾನ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಬಹಳ ಘೋರವಾಗಿ ನಡೆದುಕೊಂಡರು. ಆಗ ಸರಕಾರದ ವಿರುದ್ಧ ಯಾರೂ ಮಾತನಾಡದಂತೆ ಮಾಡಿದರು. ಮಾನವ ಹಕ್ಕುಗಳು ಹಾಗೂ ರಾಜಕೀಯ ಸ್ವಾತಂತ್ರ್ಯ ಎರಡನ್ನೂ ಮೊಟಕುಗೊಳಿಸಲಾಗಿತ್ತು. ಮತ್ತು ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣ ತೆಗೆದು ಹಾಕಲಾಗಿತ್ತು ಪತ್ರಿಕೆಗಳ ಮೇಲೆ ಸಂಪೂರ್ಣ ನಿಬಂರ್ಧ ಹೇರಲಾಗಿತ್ತು. ಏನಾದರೂ ಸುದ್ದಿ ಪ್ರಕಟಿಸಬೇಕಾದರೆ ಸರಕಾರದ ಅನುಮತಿ ಪಡೆದು ಪ್ರಕಟಿಸಬೇಕಿತ್ತು ಎಂದು ಹೇಳಿದರು.

ಕಾಂಗ್ರೆಸ್ಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇಡೀ ಸಂವಿಧಾನವನ್ನು ತಿರುಚಿ ಹಕ್ಕುಗಳನ್ನು ಮೊಟಕುಗೊಳಿಸಿದ್ದಂತಹ ಕಾಂಗ್ರೆಸ್ ಲೋಕಸಭೆಯಲ್ಲಿ ಸಂವಿಧಾನದ ಉಳಿವಿನ ಬಗ್ಗೆ ಮಾತನಾಡಿರುವುದು ಹಾಸ್ಯಾಸ್ಪದ. ಅದೂ ಕೂಡ ಮೊಟಕುಗೊಳಿಸಿರುವ ಸಂವಿಧಾನ, ಸಂಪೂರ್ಣವಾದ ಸಂವಿಧಾನವಿಲ್ಲ. ಅವರು ಐವತ್ತು ವರ್ಷಗಳ ಹಿಂದೆ ಇದೇ ಸಂವಿಧಾನವನ್ನು ನಾವು ತಿರುಚಿದ್ದೇವು. ಪ್ರಜಾಪ್ರಭುತ್ವದ ಕೊಲೆ ಮಾಡಿದ್ದೇವು ಎಂದು ನೆನಪು ಮಾಡಿಕೊಳ್ಳಬೇಕು. ಎಲ್ಲ ಹಕ್ಕುಗಳ ಹರಣ ಮಾಡಿದ್ದೇವೆ ಎಂದು ನೆನಪು ಮಾಡಿಕೊಳ್ಳದಿರುವುದು ಕಾಂಗ್ರೆಸ್ಸಿನ ಭಂಡತನ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ದೇಶದಲ್ಲಿ ಯಾವ ಹಕ್ಕು ಹರಣವಾಗಿದೆ. ವ್ಯಕ್ತಿ ಸ್ವಾತಂತ್ರ್ಯ ಹರಣವಾಗಿದೆಯೇ, ಪತಿಕಾ ಸ್ವಾತಂತ್ರ್ಯವಾಗಿದೆಯೇ, ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಪ್ರಜಾಪ್ರಭುತ್ವ ಇದೆ ಎಂದರ್ಥ. ಇದೊಂದು ನೆಪ ಅವರಿಗೆ ಮತ್ತ ಬ್ಯಾಂಕ್ ಗಳನ್ನು ಸೃಷ್ಟಿಸಲು ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News