ಜನಾರ್ದನ ರೆಡ್ಡಿ – ಸಿದ್ದರಾಮಯ್ಯ ಭೇಟಿ | “ಪರಸ್ಪರ ತೊಡೆ - ತೋಳು ತಟ್ಟಿಕೊಂಡವರು, ಈಗ ಪುಷ್ಪಗುಚ್ಛದ ಮನವಿ” ಎಂದು ಪೋಸ್ಟ್ ಮಾಡಿದ್ದ ಶಾಸಕ ಸುರೇಶ್ ಕುಮಾರ್
ಬೆಂಗಳೂರು: “ಅಂದು ಅವರು ಇವರ ವಿರುದ್ಧ ತೊಡೆ ತಟ್ಟಿದ್ದರು. ಇವರು ಅವರ ವಿರುದ್ಧ ತೋಳು ತಟ್ಟಿದ್ದರು. ಅಂದು ಬಳ್ಳಾರಿಗೆ ಪಾದಯಾತ್ರೆಯ ಮೂಲಕ ಆಕ್ರೋಶ. ಇಂದು ಪುಷ್ಪಗುಚ್ಛದ ಮೂಲಕ ಮನವಿ” ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಜನಾರ್ದನ ರೆಡ್ಡಿ ಭೇಟಿ ಬಗ್ಗೆ ಫೇಸ್ ಬುಕ್ ಪೋಸ್ಟ್ ನಲ್ಲಿ ವ್ಯಂಗ್ಯವಾಡಿದ್ದರು.
ರಾಜ್ಯಸಭಾ ಚುನಾವಣೆ ಹಿನ್ನಲೆ ಗಂಗಾವತಿ ಕ್ಷೇತ್ರದ ಪಕ್ಷೇತರ ಶಾಸಕ ಜನಾರ್ದನ ರೆಡ್ಡಿ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸೋಮವಾರ ಭೇಟಿಯಾಗಿ ಚರ್ಚಿಸಿದ್ದರು. ಸುರೇಶ್ ಕುಮಾರ್ ಅವರ ಫೇಸ್‌ಬುಕ್ ಪೋಸ್ಟ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗಿದ್ದು, ಪರ ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಕನಕಪುರ ವೆಂಕಟೇಶ ಮೂರ್ತಿ ಎಂಬವರು ಪ್ರತಿಕ್ರಿಯಿಸಿ, "ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಭಾಗಿಯಾಗಿದ್ದ, ಯಾವ ಅಶೋಕ್ ಚವಾಣ್ ವಿರುದ್ಧ ಪ್ರಧಾನಿ ಮೋದಿ ಆದಿಯಾಗಿ ದೇಶದಾದ್ಯಂತ ಬಿಜೆಪಿ ಪಕ್ಷ ವಿರೋಧ ಮಾಡಿತ್ತೋ, ಅದೇ ವ್ಯಕ್ತಿಯನ್ನು ಬರೀ ಪಕ್ಷಕ್ಕೆ ಸೇರಿಸಿಕೊಳ್ಳುವುದು ಇರಲಿ, ಸೀದಾ ರಾಜ್ಯಸಭೆ ಸೀಟನ್ನು ಬಿಜೆಪಿ ಕೊಟ್ಟಿದೆ! ರಾಜಕಾರಣಿಯಾಗಿರುವ ನೀವು ಈ ಮಾತು ಹೇಳಿದರೆ ಅದು ಆಶಾಢಭೂತಿತನ ಎನ್ನಿಸಿಕೊಳ್ಳುತ್ತದೆ ಅಷ್ಟೇ. ಇದನ್ನೆಲ್ಲಾ ಎಲ್ಲಾ ಪಕ್ಷಗಳಲ್ಲಿ ದಿನಾ ಬೆಳಿಗ್ಗೆ ನೋಡೋ ಮತದಾರರ ಕಥೆ ಹೇಳಿ. ದಿನೇ ದಿನೇ ಅಧೋಗತಿ ತಲುಪುತ್ತಿರುವ ರಾಜಕೀಯ ನೋಡಬೇಕಾಗಿರುವುದು ನಮ್ಮ ಕರ್ಮ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಜು ಎಂ ಕಪ್ಪಸೋಗೆ ಎಂಬವರು, "ನಿಮ್ಮ ಸಹೋದರಿ ಸುಷ್ಮಾ ಸ್ವರಾಜ್ ಅವರು ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಕುಂಕುಮ ಪಡೆಯುವ ನೆಪದಲ್ಲಿ ಬಳ್ಳಾರಿಗೆ ಬರ್ತಾ ಇದ್ದರು. ಅಕ್ರಮ ಗಣಿ ಲೂಟಿ ಮಾಡಿದ್ದ ರೆಡ್ಡಿ ಬ್ರದರ್ಸ್ ಕೈಗಳಿಂದಲೇ ಹೋಗುವಾಗ ಸೂಟ್ ಕೇಸ್ ನಲ್ಲಿ 'ಲಕ್ಷ್ಮಿ'ಯನ್ನು ಬಹಳ ಜೋಪಾನವಾಗಿ ತೆಗೆದುಕೊಂಡು ಹೋಗುತ್ತಿದ್ದರು. ಅವಾಗ ಎಲ್ಲಿ ಹೋಗಿ ಅಡಗಿ ಹೋಗಿತ್ತು ಪ್ರಶ್ನಿಸುವ ನೈತಿಕತೆ? ಮಾನ್ಯ ಸುರೇಶ್ ಕುಮಾರ್ ಅವರೇ. ನಿಮ್ಮ ಉಸ್ತುವಾರಿ ಇದ್ದಾಗಲೇ ಚಾಮರಾಜನಗರದಲ್ಲಿ ಆಮ್ಲಜನಕ ಸಿಗದೇ 34 ಅಮಾಯಕ ಜನ ಜೀವ ಕಳೆದುಕೊಳ್ಳಲು ನೀವು ನೇರವಾಗಿ ಕಾರಣರಾಗಿದ್ದಿರಿ. ಇದು ನೀವೊಬ್ಬ ಅಸಮರ್ಥ ಎಂಬುದನ್ನು ಹಾಗೂ ನೀವೊಬ್ಬ ಮಹಾನ್ ಜಾತಿವಾದಿ ಎಂಬುದು ಪಠ್ಯಪುಸ್ತಕ ರಚನೆಯ ವಿವಾದದ ವೇಳೆ ಈಗಾಗಲೇ ಬಟಾ ಬಯಲಾಗಿದೆ. ಇವುಗಳನ್ನು ಪ್ರಶ್ನಿಸಲು ನಿಮ್ಮಲ್ಲಿ ಈಗ ಯಾವ ನೈತಿಕತೆಯೂ ಉಳಿದುಕೊಂಡಿಲ್ಲ " ಎಂದು ಕಮೆಂಟ್ ಮಾಡಿದ್ದಾರೆ.
ಮಂಜುನಾಥ್ ಪಟ್ಟೆಪುರ್ ಎಂಬವರು, "ನೀವಾದ್ರೆ ಯಾರನ್ನು ಬೇಕಾದರೂ ಪಕ್ಷಕ್ಕೆ ಸೇರಿಸಿಕೊಳ್ಳಬಹುದು, ಮತ್ತು ಭೇಟಿಯಾಗಬಹುದು, ಬೇರೆಯವರಾದ್ರೆ ನಿಮಗೇನು ಆಗುತ್ತೆ ಸಾರ್? ಇದು ಪ್ರಜಾಪ್ರಭುತ್ವದ ಎಲ್ಲರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ ಏನಂತೀರಾ?", ಎಂದು ಪ್ರಶ್ನಿಸಿದ್ದಾರೆ.
ನಿರಂಜನ್ ಭಟ್ ಎಂಬವರು, “ತಿರುಗಿ ಬಂದರೆ... ತಮಗೂ ಬೇಕಾದ ಸರಕೇ ಅಲ್ಲವೆ ಇದು?” ಎಂದು ವ್ಯಂಗ್ಯವಾಡಿದ್ದಾರೆ.
ಸತೀಶ್ ಗೌಡ ಎಂಬವರು " ನಮ್ ಕಾಂಗಿಗಳಿಗೆ ನೇರವಾಗಿ ರಾಜಕಾರಣ ಮಾಡಿ ಅಭ್ಯಾಸ ...ನೀವು ಯಾವತ್ತಾದರೂ ಮಾಡಿದ್ದೀರ? ಒಂದೇ ಒಂದು ಉದಾಹರಣೆ ಕೊಡಿ ಸಾರ್" ಎಂದು ಪ್ರಶ್ನಿಸಿದ್ದಾರೆ.
ಚಿನ್ನಪ್ಪ ಎಂಬವರು" ಮಹಾರಾಷ್ಟ್ರದ ಅಜಿತ್ ಪವಾರ್, ಅಸ್ಸಾಂನ ಮುಖ್ಯಮಂತ್ರಿ, ಬಾಂಬೆ ಬಾಯ್ಸ್ ಅವರೆಲ್ಲಾ ಯಾರು ಸರ್? ಮೋದಿ ಸರಕಾರದ ಶೇ 50ರಷ್ಟು ಎಂಪಿಗಳು ಕಾಂಗ್ರೆಸಿನವರು” ಎಂದು ಹೇಳಿದ್ದಾರೆ.
ಡಿ ಪರಶುರಾಂ ಎಂಬವರು, "ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಏಕೆಂದರೆ ರಾಜ್ಯ ಬಿಜೆಪಿ ಒಮ್ಮೆ ಅಧಿಕಾರದೊಳಗೆ ಬರಲು ಇವರ ಗಣಿ ಹಣ ಬೇಕಿತ್ತು. ನಾಲಾಯಕ್ ಗಳಿಗೆ ತೀಟೆ ತೀರಿತು. ಮತ್ತೊಮ್ಮೆ ಯಾಕೆ ಬೇಕು ಇವರು?”, ಎಂದು ಬರೆದುಕೊಂಡಿದ್ದಾರೆ.
ರವಿಕುಮಾರ್ ಬೆಟಗೇರಿ ಎಂಬವರು, "ಸರ್ ಇವರೆಲ್ಲ ಅನುಕೂಲ ಸಿಂಧುಗಳು. ತಮಗೆ ಬಂದ ಹಾಗೆ ಬಣ್ಣ ಬದಲಿಸುವ ವ್ಯಕ್ತಿಗಳು. ಮೋದಿಜಿ ಇರುವವರೆಗೂ ಯಾರು ಏನು ಮಾಡಲು ಆಗುವುದಿಲ್ಲ" ಎಂದು ಹೇಳಿದ್ದಾರೆ.