ಗಾಂಧಿಜಿ ವಾಸ್ತವ್ಯ ಹೂಡಿದ್ದ ವೃಕ್ಷದ ಕೆಳಗೆ ಜಯಂತಿ ಆಚರಣೆ
ಬೆಂಗಳೂರು, ಅ.2:ರಾಷ್ಟ್ರಪಿತಿ ಮಹಾತ್ಮ ಗಾಂಧೀಜಿ ಅವರ ಬೆಂಗಳೂರಿಗೆ ಆಗಮಿಸಿದ್ದ ವೇಳೆ ವಾಸ್ತವ್ಯ ಹೂಡಿದ್ದ ಜ್ಯೋತಿ ವೃಕ್ಷದ ಬಳಿ ವಿಶೇಷವಾಗಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.
ರಾಷ್ಟ್ರಪಿತ ಮಹಾತ್ಮಗಾಂಧಿ ಚಿಂತನ ವೇದಿಕೆ ವತಿಯಿಂದ ಸೋಮವಾರ ಇಲ್ಲಿನ ಕುಮಾರಕೃಪಾ ಬಳಿಯಿರುವ ಜ್ಯೋತಿ ವೃಕ್ಷದ ಬಳಿ ಹಿರಿಯ ಸಮಾಜವಾದಿ ಡಾ.ಎಂ.ಪಿ.ನಾಡಗೌಡ ಅವರ ನೇತೃತ್ವದಲ್ಲಿ ಗಾಂಧೀಜಿ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಈ ವೇಳೆ ಕುರಿತು ಪ್ರಕ್ರಿಯಿಸಿದ ಡಾ.ಎಂ.ಪಿ.ನಾಡಗೌಡ, ಮಹಾತ್ಮಾ ಗಾಂಧೀಜಿಯವರು 1327ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಮಾರಕೃಪಾ ರಸ್ತೆಯ ಈ ಪ್ರದೇಶದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು. ಜತೆಗೆ, ಪ್ರಾರ್ಥನೆಯನ್ನು ಕೈಗೊಂಡಿದ್ದರು. ಆ ಜಾಗವಲ್ಲಿಂದ ಅಂದಿನಿಂದ ಜ್ಯೋತಿ ವೃಕ್ಷ ಹೆಸರಿನಲ್ಲಿ ಗಿಡನೆಟ್ಟು ಸ್ಮಾರಕ ನಿರ್ಮಾಣ ಮಾಡಲಾಗಿದೆ. ಅವರ ನೆನಪಿನಲ್ಲಿ ಇಂದಿಗೂ ಇಲ್ಲಿ ಗಾಂಧಿವಾದಿಗಳು ಬರುತ್ತಾರೆ ಎಂದು ಹೇಳಿದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ಮಾತನಾಡಿ, ಮಹಾತ್ಮ ಗಾಂಧೀಜಿ ಎಂಬ ವ್ಯಕ್ತಿ ಹುಟ್ಟಿದ್ದರೆ? ಈ ನೆಲದಲ್ಲಿ ಬದುಕಿದ್ದರೆ? ಎಂದು ಮುಂದಿನ ಪೀಳಿಗೆಗೆ ಪ್ರಶ್ನಾರ್ಥಕ ಚಿಹ್ನೆ ಮೂಡಬಹುದು. ಆ ರೀತಿ ಬದುಕಲು ಸಾಧ್ಯವೇ ಎಂಬ ಅನುಮಾನವೂ ಕೆಲವರಲ್ಲಿ ಮೂಡಬಹುದು. ತಮ್ಮ ಪ್ರಾಮಾಣಿಕತೆ, ಸತ್ಯ, ಸರಳತೆ ಮೂಲಕ ಗಾಂಧೀಜಿ ಮಹಾತ್ಮರಾಗಿ ಬೆಳೆದರು. ಅಹಿಂಸೆ ಮೂಲಕ ಸಾಮಾನ್ಯ ಜನರನ್ನು ಕೂಡ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡಿದ ಗಾಂಧೀಜಿ, ಉಪ್ಪು, ಚರಕ, ಖಾದಿಯಂತಹ ವಸ್ತುಗಳನ್ನೇ ಶಸ್ತ್ರಗಳನ್ನಾಗಿ ಪರಿವರ್ತಿಸಿದರು ಎಂದು ನುಡಿದರು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಕೆ.ಎಂ.ಪಾಲಾಕ್ಷ, ಎಚ್.ಕೆ.ವಿವೇಕಾನಂದ, ಪವನ್ ಮಣಿಕೊಂಡ, ಡಾ.ಎಸ್ಪಿ. ದಯಾನಂದ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.