ಬೆಳಗಾವಿ ಅಧಿವೇಶನ | ʼವಕ್ಫ್ ಆಸ್ತಿʼ ವಿಚಾರಗಳಲ್ಲಿ ಸುಳ್ಳು ಕಥೆಗಳನ್ನು ಸೃಷ್ಟಿಸಿ ಹರಡಲಾಗುತ್ತಿದೆ : ಕೃಷ್ಣ ಭೈರೇಗೌಡ

Update: 2024-12-18 16:17 GMT

 ಕೃಷ್ಣ ಭೈರೇಗೌಡ 

ಬೆಳಗಾವಿ : ರಾಜ್ಯದಲ್ಲಿ ವಕ್ಫ್ ಆಸ್ತಿ ವಿಚಾರಗಳಲ್ಲಿ ಸುಳ್ಳು ಕಥೆಗಳನ್ನು ಸೃಷ್ಟಿಸಿ, ಸಾರ್ವಜನಿಕರು ಹಾಗೂ ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆದಿದೆ. ಆದರೆ ಎಲ್ಲ ರೈತರ ಹಿತ ಕಾಯಲು ನಮ್ಮ ಸರಕಾರ ಬದ್ಧವಾಗಿದ್ದು, ಯಾವುದೇ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದರು.

ಬುಧವಾರ ವಿಧಾನಸಭೆಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ನಿಯಮ 69ರಡಿ ನಡೆದಿದ್ದ ಚರ್ಚೆಗೆ ಉತ್ತರಿಸಿದ ಅವರು, ವಕ್ಫ್ ಆಸ್ತಿಗಳ ವಿಚಾರದಲ್ಲಿ ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಿರುವುದರಿಂದ, ಸಾಮರಸ್ಯದಿಂದ ಬಾಳಲು ಸತ್ಯ ಯಾವುದು ಸುಳ್ಳು ಯಾವುದು ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕಿದೆ ಎಂದು ಹೇಳಿದರು.

ವಕ್ಫ್ ಕಾಯ್ದೆ 1913ರಲ್ಲಿ ಬ್ರಿಟೀಷರು ಮಾಡಿದ್ದು, ನಂತರದಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿಯೂ ಮಾಡಲಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿಯೆ ವಕ್ಫ್ ಕಾಯ್ದೆಯನ್ನು ಮಾಡಲಾಗಿದೆ. ಸರಕಾರದಲ್ಲಿ ಲಭ್ಯವಿರುವ ದಾಖಲೆಗಳಂತೆ ರಾಜ್ಯದಲ್ಲಿ 1.12 ಲಕ್ಷ ಎಕರೆ ವಕ್ಫ್ ಗೆ ಸೇರಿದ್ದು, ಆದರೆ 20,524 ಎಕರೆ ಮಾತ್ರ ವಕ್ಫ್‌ಗೆ ಸಿಕ್ಕಿದೆ. ಇನ್ನೂ ಸುಮಾರು 90 ಸಾವಿರ ಎಕರೆಯಷ್ಟು ಪ್ರದೇಶ ವಕ್ಫ್‌ಗೆ ದೊರೆತಿಲ್ಲ ಎಂದು ಅವರು ಹೇಳಿದರು.

ಆಗ ಪಹಣಿಯಲ್ಲಿ ವಕ್ಫ್ ಹೆಸರಿನಲ್ಲಿ ನಮೂದಾಗದೇ ಇದ್ದುದರಿಂದ ದಾನ ಕೊಟ್ಟವರ ಹೆಸರಿನವರಲ್ಲಿ ಅಥವಾ ಅವರ ಕುಟುಂಬದವರ ಹೆಸರಿನಲ್ಲಿಯೇ ಆಸ್ತಿ ಮುಂದುವರೆದಿದೆ. ಇನಾಮ್ ರದ್ಧತಿ ಹಾಗೂ ಭೂ ಸುಧಾರಣೆ ಕಾಯ್ದೆಯ ಬಳಿಕವು ಸುಮಾರು 73 ಸಾವಿರ ಎಕರೆ ಬಹುತೇಕ ರೈತರ ವಶದಲ್ಲಿಯೇ ಇದೆ. ಯಾವುದೇ ರೈತರಿಗೆ ಅನ್ಯಾಯವಾಗಲು ಸರಕಾರ ಅವಕಾಶ ನೀಡುವುದಿಲ್ಲ. ರೈತರಿಗೆ ನೀಡಿರುವ ಎಲ್ಲ ನೋಟಿಸ್‍ಗಳನ್ನು ಈಗಾಗಲೆ ಸರಕಾರ ಹಿಂಪಡೆದಿದ್ದು, ಇನ್ನೂ ಉಳಿದಿದ್ದರೆ, ಅವುಗಳನ್ನು ಕೂಡ ಹಿಂಪಡೆಯಲಾಗುವುದು ಎಂದು ಅವರು ಸ್ಪಷ್ಟಣೆ ನೀಡಿದರು.

ಒತ್ತುವಾರಿಯಾಗಿರುವ 19,987 ಎಕರೆ ವಕ್ಫ್ ಭೂಮಿಯನ್ನು, ಅದೂ ಕೂಡ ಸರಕಾರ ಈಗಾಗಲೆ ನೀಡಿರುವ ಖಬರಸ್ತಾನ್, ದರ್ಗಾ ಮಸೀದಿಗಳಿಗೆ ನೀಡಿರುವ ಭೂಮಿಯನ್ನು ಕೆಲವು ಖಾಸಗಿಯವರು ಒತ್ತುವರಿ ಮಾಡಿದ್ದಾರೆ, ಈ ಭೂಮಿಯನ್ನು ಮಾತ್ರ ವಕ್ಫ್‌ಗೆ ಹಸ್ತಾಂತರಿಸಲು ವಕ್ಫ್ ಮಂಡಳಿ ಕೇಳಿಕೊಂಡಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.

ಈ ಹಿಂದಿನ ಸರಕಾರದ ಕಾಲದಲ್ಲಿ 4500 ಆಸ್ತಿಗಳನ್ನು ವಕ್ಫ್‌ಗೆ ಖಾತೆ ಬದಲಾವಣೆ ಮಾಡಲಾಗಿದೆ. ಆದರೆ ನಮ್ಮ ಸರಕಾರ ಬಂದ ಬಳಿಕ ಕೇವಲ 600 ಆಸ್ತಿಗಳನ್ನು ಮಾತ್ರ ವಕ್ಫ್‌ ಗೆ ಖಾತೆ ಬದಲಾವಣೆ ಮಾಡಲಾಗಿದೆ. 2016 ರಲ್ಲಿ ಕೇಂದ್ರ ಸರಕಾರ ಮಾದರಿ ವಕ್ಫ್ ನಿಯಮಾವಳಿಗಳನ್ನು ರಚಿಸಿ, ವಕ್ಫ್ ಆಸ್ತಿಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಲು ನಿರ್ದೇಶನ ಕೊಟ್ಟಿದೆ ಎಂದು ಅವರು ಹೇಳಿದರು.

ಆಳಂದದಲ್ಲಿ 2020ರಲ್ಲಿ ಹಿಂದಿನ ಸರಕಾರ ವಕ್ಫ್ ಆಸ್ತಿ ಎಂದು ಪ್ರಕಟಿಸಿದ್ದ ಬೀರಲಿಂಗೇಶ್ವರ ದೇವಸ್ಥಾನವನ್ನು ನಮ್ಮ ಸರಕಾರ ಬೀರಲಿಂಗೇಶ್ವರ ದೇವಸ್ಥಾನ ಎಂದು ಬದಲಿಸಿ, ಆಸ್ತಿ ಮಾಡಿಕೊಟ್ಟಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಓದಿದ ಶಾಲೆಯೂ ವಕ್ಫ್ ಆಸ್ತಿಯೆಂದು ಸುಳ್ಳು ಸುದ್ದಿ ಹರಡಿಸಿದ್ದು, 2019 ರಲ್ಲಿ ಇದ್ದ ಸರಕಾರದ ಅವಧಿಯಲ್ಲಿ ಇಲ್ಲಿನ ಸಮೀಪದ ದರ್ಗಾ ವಕ್ಫ್ ಆಸ್ತಿಯಾಗಿತ್ತು ಎಂದು ಅವರು ತಿಳಿಸಿದರು.

ಸಮೀಪದಲ್ಲಿಯೇ ಶಾಲೆ ಇದ್ದುದರಿಂದ ಒಂದೇ ಸವೇ ನಂ. ಬರುವುದರಿಂದ ಶಾಲೆಯನ್ನು ವಕ್ಫ್ ಆಸ್ತಿ ಎಂದು ಹೇಳಿದ್ದರು. ಆದರೆ ನಮ್ಮ ಸರಕಾರ ನ.8 ರಂದು ಉಪವಿಭಾಗಾಧಿಕಾರಿ ಮೂಲಕ ಆದೇಶ ಮಾಡಿ, ಶಾಲೆಗೆ ಸಂಬಂಧಿಸಿದ ಭೂಮಿಯನ್ನು ಶಾಲೆಯ ಖಾತೆಗೇ ಮಾಡಿಕೊಟ್ಟಿದೆ. ಶ್ರೀರಂಗಪಟ್ಟಣದಲ್ಲಿ ದೊಡ್ಡ ಹಾರೋಹಳ್ಳಿ ಗ್ರಾಮದಲ್ಲಿ 12 ಗುಂಟೆ ಜಮೀನಿನಲ್ಲಿ ಜಾಮಾ ಮಸೀದಿ ಇದೆ. ಆದರೆ ತಹಶೀಲ್ದಾರ್ ಕಣ್ತಪ್ಪಿನಿಂದ ಮಾಡಿದ ಲೋಪದಿಂದ ದೊಡ್ಡಹಾರೋಹಳ್ಳಿ ಬದಲಿಗೆ ಮಹದೇವಪುರ ಗ್ರಾಮದಲ್ಲಿ 6 ಗುಂಟೆ ಅಂತ ಮಾಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಇಲ್ಲಿ ಚಿಕ್ಕಮ್ಮನಗುಡಿ ಇದೆ, ಆದರೆ ದೇವಸ್ಥಾನದ ಹೆಸರಿಗೆ ಯಾವುದೇ ಪಹಣಿ ದಾಖಲೆ ಇರಲಿಲ್ಲ. ಆದರೆ ನಮ್ಮ ಸರಕಾರ ಪಹಣಿಯಲ್ಲಿ ಚಿಕ್ಕಮ್ಮನಗುಡಿ ಎಂದು ನಮೂದಿಸಿ, ದೇವಸ್ಥಾನದ ಹೆಸರಿಗೆ ಆಸ್ತಿ ಮಾಡಿಕೊಟ್ಟಿದ್ದೇವೆ. ಬಿಜಾಪುರ ಜಿಲ್ಲೆಯಲ್ಲಿ ಪಡಗಾನೂರು ಗ್ರಾಮದಲ್ಲಿ ಸೋಮೇಶ್ವರ ದೇವಸ್ಥಾನ ವಕ್ಫ್ ಆಸ್ತಿಯಾಗಿದೆ ಎಂದು ಸುಳ್ಳು ಸುದ್ದಿ ಹರಡಿಸಿದ್ದು, ಇಲ್ಲಿನ ಸರ್ವೆ ನಂ.220 ರಲ್ಲಿ 57 ಎಕರೆ ಜಮೀನು ಇದೆ. ಆದರೆ ಇಲ್ಲಿ ವಕ್ಫ್ ಇರುವುದು ಕೇವಲ 2 ಎಕರೆ ಮಾತ್ರ, ಉಳಿದ ಜಮೀನಿನಲ್ಲಿ 18 ರೈತರಿದ್ದಾರೆ. ಸೋಮೇಶ್ವರ ದೇವಸ್ಥಾನಕ್ಕೂ ವಕ್ಫ್ ಆಸ್ತಿಗೂ ಅಥವಾ ರೈತರ ಆಸ್ತಿಗೂ ಯಾವುದೇ ಒಂದಕ್ಕೊಂದು ಸಂಬಂಧವಿಲ್ಲ ಎಂದು ಅವರು ವಿವರಣೆ ನೀಡಿದರು.

ವಿಜಯಪುರದಲ್ಲಿ ಪೊಲೀಸ್ ಕ್ವಾಟ್ರಸ್ ಜಾಗ ವಕ್ಫ್ ಎಂದು ಪೊಲೀಸರನ್ನು ಎತ್ತಿಕಟ್ಟಿದರು. ಆದರೆ ಆ ಜಾಗದ ಮೇಲೆ ಯಾವುದೇ ದಾವೆಯೂ ಇಲ್ಲ, ಯಾರೂ ಕೂಡ ಈ ಜಾಗ ನಮ್ಮದು ಎಂದು ಕ್ಲೇಮ್ ಮಾಡಿಲ್ಲ. ಆದರೆ ಆ ಸ್ಥಳದಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಮಸೀದಿ ಇದೆ, ಅದನ್ನು ಸುಸ್ಥಿತಿಯಲ್ಲಿಡುವಂತೆ ಮಾತ್ರ ಕೋರಿಕೆ ಸಲ್ಲಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಬಿಜಾಪುರದಲ್ಲಿ ಜಿಲ್ಲಾಧಿಕಾರಿ ಮನೆ ವಕ್ಫ್ ಆಸ್ತಿ ಎಂದು ಸುದ್ದಿ ಹರಡಿಸಿದರು, ಆದರೆ ಬಿಜಾಪುರದಲ್ಲಿನ ಜಿಲ್ಲಾಧಿಕಾರಿಗಳ ವಸತಿ ಗೃಹ 400 ವರ್ಷ ಹಳೆಯ ಕಟ್ಟಡವಾಗಿದ್ದು, ಆದಿಲ್‍ಶಾಹಿ ವಂಶಸ್ಥರು ನಿರ್ಮಿಸಿದ್ದು, ಎಲ್ಲೂ ಕೂಡ ಇದು ವಕ್ಫ್ ಆಸ್ತಿ ಎಂದು ನಮೂದಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ನಮ್ಮ ಸರಕಾರ ಕೇವಲ ವಕ್ಫ್ ಆಸ್ತಿ ಸಂರಕ್ಷಣೆಗೆ ಮಾತ್ರ ಕ್ರಮ ಕೈಗೊಂಡಿಲ್ಲ, ಮುಜರಾಯಿ ಇಲಾಖೆಗೆ ಸಂಬಂಧಿಸಿದ ಆಸ್ತಿಗಳನ್ನು ಕೂಡ ಸಂರಕ್ಷಣೆಗೆ ಕ್ರಮ ಕೈಗೊಂಡಿದೆ. 2023ರಲ್ಲಿ ನಮ್ಮ ಸರಕಾರ 5402 ಎಕರೆ ಭೂಮಿಯನ್ನು ಮುಜರಾಯಿ ದೇವಸ್ಥಾನಗಳಿಗೆ ಖಾತೆ ಮಾಡಿಕೊಟ್ಟಿದೆ. ಈ ವರ್ಷ 5287 ಎಕರೆ ಹಿಂದೂ ದೇವಸ್ಥಾನಗಳಿಗೆ ಖಾತೆ ಮಾಡಿ, ದೇವಸ್ಥಾನಗಳ ಜಾಗವನ್ನು ಸಂರಕ್ಷಣೆ ಮಾಡಿದ್ದೇವೆ ಎಂದು ಕೃಷ್ಣ ಬೈರೇಗೌಡ ವಿವರಣೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News