‘ಮುಂದುವರಿದ ಜಾತಿಗಳನ್ನು ಪ್ರವರ್ಗ-2ಎಗೆ ಸೇರಿಸಬಾರದು’ : ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಬೃಹತ್ ಧರಣಿ
ಬೆಳಗಾವಿ : ‘ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರೆದ ಯಾವುದೇ ಜಾತಿ ಮತ್ತು ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-2 ‘ಎ’ ಮೀಸಲಾತಿ ಪಟ್ಟಿಯಲ್ಲಿ ಸೇರಿಸಬಾರದು’ ಎಂದು ಆಗ್ರಹಿಸಿ ‘ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ’ದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿ, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬುಧವಾರ ಇಲ್ಲಿನ ಸುವರ್ಣ ಗಾರ್ಡನ್‍ನಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಒಕ್ಕೂಟದ ಸಾವಿರಾರು ಕಾರ್ಯಕರ್ತರು, ಮುಂದುವರಿದ ಜಾತಿಗಳನ್ನು ಪ್ರವರ್ಗ 2 ಎ ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೆ ಆಕ್ಷೇಪಿಸಿ, ಧಿಕ್ಕಾರದ ಘೋಷಣೆ ಕೂಗಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಈಗಾಗಲೇ ಸ್ವೀಕೃತವಾಗಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ’ಯನ್ನು ತಕ್ಷಣ ಬಿಡುಗಡೆಗೊಳಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 2,500 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಬೇಕು. ಸರಕಾರದ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರುಗಳ ಸ್ಥಾನಗಳಿಗೆ ಹಿಂದುಳಿದ ವರ್ಗದವರಿಗೆ ಅವಕಾಶ ಕಲ್ಪಿಸಬೇಕು. ಈಗಾಗಲೇ ಅವಧಿ ಮುಗಿದಿರುವ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ಪುನರ್ ರಚನೆ ಮಾಡಬೇಕು. ಹಿಂದುಳಿದ ವರ್ಗಕ್ಕೆ ಬರುವ ಒಟ್ಟು ಅನುದಾನದಲ್ಲಿ ಶೇ.75ರಷ್ಟು ಅನುದಾನ ಪ್ರವರ್ಗ-1 ಮತ್ತು ಪ್ರವರ್ಗ-2ಎಗೆ ಒದಗಿಸಬೇಕು ಎಂದು ಕೋರಿದರು.
ಇದೇ ವೇಳೆ ಧರಣಿ ಸ್ಥಳಕ್ಕೆ ಧಾವಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿ ಮಾತನಾಡಿದ ಉಭಯ ಸಚಿವರು, ಹಿಂದುಳಿದ ಜಾತಿಗಳ ಒಕ್ಕೂಟದ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಸಂವಿಧಾನ ಬದ್ಧವಾಗಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಧರಣಿ ಸತ್ಯಾಗ್ರಹದ ನೇತೃತ್ವವನ್ನು ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ, ಮುಖಂಡರಾದ ಮಾವಳ್ಳಿ ಶಂಕರ್, ಬಸವರಾಜ ಬಸಲಗುಂದಿ, ಗೋಪಾಲ, ಮಹಾತೇಶ್ ಕೌಲಗಿ, ಆರ್.ರಾಮಕೃಷ್ಣಪ್ಪ ಸೇರಿದಂತೆ ಮತ್ತಿತರರು ವಹಿಸಿದ್ದರು.