ಬಾಣಂತಿಯರ ಸರಣಿ ಸಾವಿಗೆ ಸರಕಾರವೇ ನೇರ ಹೊಣೆ : ಡಾ.ಅಶ್ವತ್ಥ ನಾರಾಯಣ ಆರೋಪ

Update: 2024-12-18 17:06 GMT

ಡಾ.ಸಿ.ಎನ್.ಅಶ್ವತ್ಥ ನಾರಾಯಣ

ಬೆಳಗಾವಿ (ಸುವರ್ಣ ವಿಧಾನಸೌಧ) : ‘ರಾಜ್ಯದಲ್ಲಿ ಸಂಭವಿಸಿರುವ ಬಾಣಂತಿಯರ ಸರಣಿ ಸಾವಿಗೆ ಸರಕಾರವೇ ನೇರ ಹೊಣೆ. ಈ ಸರಕಾರ ಕೊಲೆಗಡುಕ ಸರಕಾರ’ ಎಂದು ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ‘ಸರಕಾರಿ ಆಸ್ಪತ್ರೆಗಳಲ್ಲಿ ಟೆಂಡರ್ ವಿಳಂಬದಿಂದಾಗಿ ಔಷಧಗಳ ಪೂರೈಕೆ ಸ್ಥಗಿತಗೊಂಡಿದ್ದು, ವೈದ್ಯರ ಕೊರತೆ ನಕಲಿ ವೈದ್ಯರ ಹಾವಳಿ’ ಕುರಿತು ವಿಚಾರದ ಮೇಲೆ ಮಾತನಾಡಿದ ಅವರು, ಬಾಣಂತಿಯರ ಸಾವಿನ ಹೊಣೆಯನ್ನು ಆರೋಗ್ಯ ಸಚಿವರೇ ಹೊರಬೇಕು. ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾ ಮಾಡಬೇಕು. ಅವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಆರೋಪ-ಪ್ರತ್ಯಾರೋಪ, ಗದ್ದಲಕ್ಕೆ ಕಾರಣವಾಯಿತು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಖಾದರ್ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಯಿತು. ಗದ್ದಲದ ನಡುವೆಯೇ ಮಾತನಾಡಿದ ಡಾ.ಅಶ್ವಥ್ ನಾರಾಯಣ, ಸರಕಾರ ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ. ಸಂಪೂರ್ಣ ವಿಫಲವಾಗಿದೆ. ಬ್ರೈನ್ ಕ್ಲಿನಿಕ್ ಪ್ರಾರಂಭಿಸಿ ದೊಡ್ಡದಾಗಿ ಪ್ರಚಾರ ಪಡೆದರು. ಆದರೆ ಒಬ್ಬ ನರರೋಗ ತಜ್ಞರನ್ನು ನೇಮಕ ಮಾಡಿದ್ದಾರೆಯೇ?. ವೈದ್ಯರ ವರ್ಗಾವಣೆ ಕೌನ್ಸಿಲ್ ಮೂಲಕ ಆಗಿಲ್ಲ. ವರ್ಗಾವಣೆ ಕಾಯ್ದೆ ಉಲ್ಲಂಘನೆಯಾಗಿದೆ. ಈ ಸರಕಾರ ಅಧಿಕಾರಕ್ಕೆ ಬಂದ ನಂತರ ಒಬ್ಬೇ ಒಬ್ಬ ವೈದ್ಯ, ನರ್ಸ್ ಅನ್ನು ನೇಮಕ ಮಾಡಿಲ್ಲ ಎಂದು ದೂರಿದರು.

ಆರೋಗ್ಯ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಲ್ಲ. 16 ಜಂಟಿ ನಿರ್ದೇಶಕರ ಹುದ್ದೆಗಳು ಆರೋಗ್ಯ ಇಲಾಖೆಯಲ್ಲಿ ಖಾಲಿ ಇವೆ. 12 ಸಾವಿರ ಕೋಟಿ ರೂ.ಇಲಾಖೆಗೆ ಒದಗಿಸಿದ್ದರೂ ಈ ವರ್ಷ ಶೇ.23ರಷ್ಟು ಮಾತ್ರ ಬಳಕೆಯಾಗಿದೆ. 108 ಆಂಬುಲೆನ್ಸ್‍ಗಳಿಗೆ ಜಿಪಿಎಸ್ ವ್ಯವಸ್ಥೆಯೇ ಇಲ್ಲ. ಅವು ಆಂಬುಲೆನ್ಸ್‍ಗಳೋ, ಶವಾಗಾರಗಳೋ ಗೊತ್ತಿಲ್ಲ. ಒಂದೊಂದು ಆಸ್ಪತ್ರೆ ಒಂದೊಂದು ಆಸ್ಪತ್ರೆಯ ಬಳಕೆದಾರರ ಶುಲ್ಕ ವಿಧಿಸುತ್ತಿವೆ. ಏಕರೂಪದ ಶುಲ್ಕವಿಲ್ಲ ಎಂದು ಅವರು ಆರೋಪಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಚೀಟಿದಾರರಿಗೂ ಶುಲ್ಕ ವಿಧಿಸಲಾಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಶುಲ್ಕ ಪಾವತಿ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ಜಿಲ್ಲಾ, ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಐಸಿಯು, ಟ್ರಾಮಾ ಸೆಂಟರ್ ಮುಚ್ಚಿ ಹೋಗಿವೆ. ಓಷಧ ನಿಯಂತ್ರಣ ಇಲಾಖೆಯಲ್ಲಿ 761 ವಿಧದ ಅಗತ್ಯ ಔಷಧಿಗಳು ಲಭ್ಯವಿರಬೇಕು. ಆದರೆ, 253 ಮಾತ್ರ ಇದ್ದು 508 ಔಷಧಿಗಳ ದಾಸ್ತಾನು ಇಲ್ಲ. ಬೇಡಿಕೆಯಷ್ಟು ಔಷಧಿ ಇರಬೇಕು ಎಂಬುದಿದೆ. ಔಷಧಿ ಗುಣಮಟ್ಟದಲ್ಲೂ ಲೋಪವಿದೆ. ಕಳಪೆ ಗುಣಮಟ್ಟದ ಔಷಧಿ ಪೂರೈಸಿದ ಕಂಪೆನಿಯ ಔಷಧಿ ತಯಾರು ಘಟಕವೇ ಗುಣಮಟ್ಟದಲ್ಲಿಲ್ಲ ಎಂದು ಅವರು ಆರೋಪ ಮಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News