ಚನ್ನಪಟ್ಟಣದಲ್ಲಿ ಮತದಾರರಿಗೆ ಕುರ್‌ಆನ್ ಪ್ರತಿಯೊಂದಿಗೆ ಹಣ ಹಂಚಿದ ಜೆಡಿಎಸ್? : ವಿಡಿಯೋ ವೈರಲ್
ಚನ್ನಪಟ್ಟಣ : ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ತಮ್ಮ ಕೊನೆ ಹಂತದಲ್ಲಿ ಮತದಾರರ ಮನವೊಲಿಸಲು ತಮ್ಮದೇ ಆದ ಕಸರತ್ತು ಮುಂದುವರಿಸಿವೆ.
ಈ ಮಧ್ಯೆ ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಕೆಲವು ಮುಖಂಡರು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು, ಮುಸ್ಲಿಂ ಮತದಾರರನ್ನು ಒಲೈಸಲು ಮುಂದಾಗಿದ್ದು, ಕುರ್‌ಆನ್ ಪ್ರತಿಯೊಂದಿಗೆ ನಗದು ಹಂಚಿರುವ ಆರೋಪ ಕೇಳಿ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಈಗಾಲೇ ಸಾಮಾಜಿಕ ಜಾಲತಾಣದಲ್ಲಿ ಕುರ್‌ಆನ್‌ನ ಪ್ರತಿಯೊಂದಿಗೆ ನಗದು ಹಂಚಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಹಾಗೂ ವಿವಾದಕ್ಕೆ ಕಾರಣವಾಗಿದೆ.
ಈಗಾಗಲೇ ವೈರಲ್ ಆಗಿರುವ ಫೋಟೋದಲ್ಲಿ ಒಂದು ಕವರ್‌ನಲ್ಲಿ ಒಂದು ಸಾವಿರ ನಗದು, ಮುಸ್ಲಿಮರು ನಮಾಝ್ ಮಾಡುವ ಮುಸಲ್ಲ(ನಮಾಝ್ ಮಾಡುವ ಬಟ್ಟೆ) ಹಾಗೂ ಕುರ್‌ಆನ್‌ನ ಒಂದು ಅಧ್ಯಾಯ ಯಾಸೀನ್‌ನ ಒಂದು ಪ್ರತಿ ಇದೆ. ಹಾಗೆಯೇ ಇದರೊಂದಿಗೆ ಜೆಡಿಎಸ್‌ನ ಕರಪತ್ರ ಇರುವುದು ನೋಡಬಹುದಾಗಿದೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಚನ್ನಪಟ್ಟಣ ನಿವಾಸಿಯೊಬ್ಬರು, ಕುರ್‌ಆನ್‌ನ ಪ್ರತಿ ಜೊತೆ ಜೆಡಿಎಸ್ ಹಣ ಹಂಚಿರುವುದಾಗಿ ಆರೋಪಿಸಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು, "ಜೆಡಿಎಸ್‌ನ ನಾಲ್ಕು ಮಂದಿ ಬಂದು ಒಂದು ಸಾವಿರ ದುಡ್ಡು, ಕುರ್‌ಆನ್ ಅಧ್ಯಾಯ ಇವೆಲ್ಲಾ ಕೊಟ್ಟು ಮತ ಕೇಳುತ್ತಿದ್ದಾರೆ. ನಾವೇನು ನಮ್ಮ ಧರ್ಮದ ವಿಶ್ವಾಸವನ್ನು ಮಾರಿಕೊಳ್ಳಬೇಕೇ? ನೀವು ಮತ ಕೇಳಿ, ಆದರೆ ನೀವು ಮಾಡುತ್ತಿರುವ ಕೆಲಸ ಏನು? ನೀವೇನು ನಮ್ಮ ಧರ್ಮವನ್ನು ಮಾರಲು ಹೊರಟಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದು ಕಡೆ ಕುರ್‌ಆನ್ ಪ್ರತಿ ಜೊತೆ ಕಾಂಗ್ರೆಸ್ ಹಣ ಹಂಚಿದೆ ಎಂದು ಜೆಡಿಎಸ್ ಮುಖಂಡರು ಸಹ ಆರೋಪ ಮಾಡುತ್ತಿದ್ದಾರೆ.