ವಾರಾಂತ್ಯದಲ್ಲಿ ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು; ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿಗೆ ತೆರಳುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ

Update: 2023-07-02 15:39 GMT

ಚಿಕ್ಕಮಗಳೂರು, ಜು.2: ಕಾಫಿನಾಡಿನಾದ್ಯಂತ ಮೋಡ ಕವಿದ ವಾತವರಣ ನಿರ್ಮಾಣವಾಗಿದ್ದು, ಗಿರಿಶ್ರೇಣಿಗಳಲ್ಲಿ ಮೋಡ ಮುಸುಕಿದ ವಾತಾವರಣದೊಂದಿಗೆ ತುಂತುರು ಮಳೆಯಾಗುತ್ತಿದೆ. ಇಡೀ ಪವರ್ತ ಶ್ರೇಣಿಗಳ ಮೇಲೆ ಮಂಜು, ಮೋಡಗಳ ಸಾಲು ಹಾಲು ಚೆಲ್ಲಿದಂತೆ ಕಂಡು ಬರುತ್ತಿದ್ದು, ಇಲ್ಲಿನ ಅಪೂರ್ವ ಪ್ರಕೃತಿ ಸೌಂದರ್ಯವನ್ನು ಸವಿಯಲು ರಾಜ್ಯದ ಮೂಲೆ ಮೂಲೆಗಳಿಂದಲೂ ಸಾವಿರಾರು ಪ್ರವಾಸಿಗರು ಕಾಫಿನಾಡಿಗೆ ಲಗ್ಗೆ ಇಡುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.

ವಾರಾಂತ್ಯದಲ್ಲಿ ಜಿಲ್ಲೆಯ ಪ್ರವಾಸಿತಾಣಗಳಿಗೆ ಪ್ರವಾಸಿಗರ ಲಗ್ಗೆ ಇಡುವುದು ಸರ್ವೆ ಸಾಮಾನ್ಯ ಆದರೆ ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಹಿನ್ನಡೆಯಾಗಿದ್ದು, ಮಲೆನಾಡು ಭಾಗದಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದ್ದರೆ ಬಯಲು ಭಾಗದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮಂಜು ಮಸುಕಿದ ವಾತಾವರಣದಲ್ಲಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಒಮ್ಮೆಲೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ವಾರಾಂತ್ಯದಲ್ಲಿ ಜಿಲ್ಲೆಗೆ ಹರಿದು ಬರುತ್ತಿದ್ದಾರೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣವಾಗಿರುವ ಮುಳ್ಳಯ್ಯನಗಿರಿ ಮತ್ತು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ಸಾವಿರಾರು ಸಂಖ್ಯೆಯ ಪ್ರವಾಸಿಗರು ಏಕಕಾಲಕ್ಕೆ ಗಿರಿ ಪ್ರದೇಶಕ್ಕೆ ಆಗಮಿಸಿದ್ದರಿಂದ ಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದ ಮೂರು ಕಿಮೀ ಉದ್ದಕ್ಕೂ ರವಿವಾರ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರವಾಸಿಗರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರೀ ವಾಹನಗಳು ಗಿರಿ ಪ್ರದೇಶದ ಕಡೆಗೆ ಏಕಕಾಲದಲ್ಲಿ ಸಾಗಿದ್ದರಿಂದ ವಾಹನ ಧಟ್ಟಣೆಯಿಂದ ಗಂಟೆಗೂ ಹೆಚ್ಚು ಕಾಲ ವಾಹನಗಳು ಮುಂದೆ ಸಾಗಲಾಗದೇ ನಿಂತಲ್ಲೇ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ತುಂತುರು ಮಳೆ ಹಾಗೂ ಟ್ರಾಫಿಕ್ ಜಾಮ್‍ನಿಂದಾಗಿ ಪ್ರವಾಸಿಗರು ಪರದಾಡಿದರು.

 

ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಪ್ರದೇಶಕ್ಕೆ ತೆರಳುವ ಮಾರ್ಗದಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಮುಳ್ಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಪ್ರದೇಶ ಸೇರಿದಂತೆ ಕೆಮ್ಮಣ್ಣಗುಂಡಿ, ಮಾಣಿಕ್ಯದಾರ, ಕಲ್ಲತ್ತಗಿರಿ ಜಲಪಾತ ಸೇರಿದಂತೆ ಇತರೆ ಪ್ರವಾಸಿತಾಣಗಳಲ್ಲಿ ಶನಿವಾರ ಹಾಗೂ ರವಿವಾರ ಭಾರೀ ಪ್ರಮಾಣದಲ್ಲಿ ಪ್ರವಾಸಿಗರ ದಂಡು ಸೇರಿತ್ತು. ಶನಿವಾರ ಹಾಗೂ ರವಿವಾರ ಮುಳ್ಳಯ್ಯನಗಿರಿ, ಬಾಬಾಬುಡನ್‍ಗಿರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ವಾರಾಂತ್ಯದಲ್ಲಿ ವಾಹನಗಳ ಧಟ್ಟಣೆ ಹೆಚ್ಚಿತ್ತು. ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಶಾರದಾಂಭೆ ದೇವಸ್ಥಾನ, ಹೊರನಾಡು ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ಭಕ್ತರು ದಂಡು ರವಿವಾರ ಭಾರೀ ಪ್ರಮಾಣದಲ್ಲಿತ್ತು. ಪ್ರವಾಸಿ ತಾಣಗಳ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ಮುಂದೆ ಪ್ರವಾಸಿಗರ ಸಾಲು ನೆರೆದಿದ್ದು, ಹೊಟೇಲ್, ರೆಸಾರ್ಟ್, ಲಾಡ್ಜ್‍ಗಳು ಪ್ರವಾಸಿಗರಿಂದ ತುಂಬಿದ್ದವು.

ಜಿಲ್ಲಾದ್ಯಂತ ಮುಂಗಾರು ಮಳೆ ಕ್ಷೀಣಿಸಿದ್ದು, ಮಲೆನಾಡು ಭಾಗದಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದ್ದರೇ, ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿನಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಗಿರಿ ಪ್ರದೇಶದಲ್ಲಿ ಧಟ್ಟ ಮಂಜು ಮುಸುಕಿದ್ದು, ಮಂಜು ಆವರಿಸಿದ ಪ್ರಕೃತಿಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಜಿಲ್ಲೆಗೆ ಹರಿದು ಬರುತ್ತಿದೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News