ಕರ್ನಾಟಕ ಬಿಜೆಪಿಯು ಸರಕಾರಗಳನ್ನು ಉರುಳಿಸುವ ಇತಿಹಾಸವನ್ನು ಹೊಂದಿದೆ: ಕೆ.ಸಿ.ವೇಣುಗೋಪಾಲ್
ಬೆಂಗಳೂರು: ಬಿಜೆಪಿ-ಜೆಡಿಎಸ್ ಪಕ್ಷಗಳ ಪಿತೂರಿಗೆ ನಾವು ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗಿ ಅವರಿಗೆ ವಾಸ್ತವಾಂಶವನ್ನು ವಿವರಿಸುತ್ತೇವಲ್ಲದೆ, ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ಸಿಎಂ ನಿವಾಸದಲ್ಲಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಗಂಭೀರ ಬೆಳವಣಿಗೆಗಳ ಕುರಿತು ರಾಜ್ಯದ ಸಚಿವರೊಂದಿಗೆ ಚರ್ಚಿಸಲಾಯಿತು. ಕರ್ನಾಟಕ ಬಿಜೆಪಿಯು ಸರಕಾರಗಳನ್ನು ಉರುಳಿಸುವ ಇತಿಹಾಸವನ್ನು ಹೊಂದಿದೆ ಎಂದು ದೂರಿದರು.
‘2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಉರುಳಿಸಿದ್ದೇ ಬಿಜೆಪಿ ಕೇಂದ್ರ ನಾಯಕತ್ವದ ಪಿತೂರಿಯಿಂದ. ಅದೇ ರೀತಿಯ ಸ್ಪಷ್ಟ ಉದ್ದೇಶದಿಂದ ಈಗಲೂ ಕರ್ನಾಟಕ ಕಾಂಗ್ರೆಸ್ ಸರಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದಾಗಲೇ ಇಡೀ ದೇಶ ಕಾಂಗ್ರೆಸ್ ಸರಕಾರದ ವಿರುದ್ಧದ ಪಿತೂರಿಯನ್ನು ಗಮನಿಸಿದೆ. ಬಿಜೆಪಿ-ಜೆಡಿಎಸ್‍ನ ಮುಖಂಡರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ನಮ್ಮ ಚುನಾಯಿತ ಸರಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯದ ಎಲ್ಲರಿಗೂ ಸಿದ್ದರಾಮಯ್ಯನವರ ಪ್ರಾಮಾಣಿಕತೆಯ ಅರಿವಿದೆ. ಅವರು ಮುಖ್ಯಮಂತ್ರಿ ಪದವಿಗೆ ಹೊಸಬರಲ್ಲ. ಅವರ ರಾಜಕೀಯ ಬದುಕು, ತತ್ವ ಸಿದ್ಧಾಂತ, ಹಿನ್ನೆಲೆ ಅವರು ಹಿಂದೆ ಹೇಗಿದ್ದರು, ಈಗ ಹೇಗಿದ್ದಾರೆ ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ತಿಳಿದಿದೆ ಎಂದು ಅವರು ತಿಳಿಸಿದರು.
ಅಸ್ತಿರಗೊಳಿಸುವ ಹುನ್ನಾರ: ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಬಿಜೆಪಿ-ಜೆಡಿಎಸ್‍ಯವರು ಇದು ರಾಜಕೀಯವಾಗಿ ನಷ್ಟ ಉಂಟು ಮಾಡುವುದು ಹಾಗೂ ವಿವಿಧ ಪ್ರಕರಣಗಳ ತನಿಖೆಯಿಂದ ವೈಯಕ್ತಿಕವಾಗಿಯೂ ಅವರಿಗೆ ತೊಂದರೆಯಾಗಲಿದೆ ಎಂಬುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಕೆಲವು ಆರೋಪಗಳನ್ನು ಮಾಡುವ ಮೂಲಕ ಸರಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
ರಾಜ್ಯಪಾಲರ ಬಳಕೆ ದುರದೃಷ್ಟಕರ: ದುರದೃಷ್ಟವಶಾತ್ ರಾಜ್ಯಪಾಲರು ಬಿಜೆಪಿ ಪಿತೂರಿಯ ಸಾಧನವಾಗಿದ್ದಾರೆ. ಮುಖ್ಯಮಂತ್ರಿಗೆ ಕಾರಣ ಕೇಳಿ ನೋಟೀಸ್ ನೀಡುವ ಮೂಲಕ ಸರಕಾರ ಅಸ್ಥಿರಗೊಳ್ಳಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವು ಈ ಪಿತೂರಿ ವಿರುದ್ಧ ಹೋರಾಡಲು ತೀರ್ಮಾನಿಸಿದ್ದು, ಕರ್ನಾಟಕದ ಜನತೆಗೆ ವಾಸ್ತವಾಂಶದ ಅರಿವು ಮೂಡಿಸಲು ನಿರ್ಧರಿಸಿದೆ. ಸಚಿವರು, ಶಾಸಕರು ಜಿಲ್ಲೆಗಳು, ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಸರಕಾರದ ಸಾಧನೆಗಳನ್ನು ವಿವರಿಸಿ, ಗ್ಯಾರಂಟಿಗಳನ್ನು ಮುಗಿಸುವ ಬಿಜೆಪಿ-ಜೆಡಿಎಸ್‍ನ ಹುನ್ನಾರವನ್ನು ಬಯಲಿಗೆಳೆಯಲಾಗುವುದು ಎಂದು ಅವರು ತಿಳಿಸಿದರು.
ಬಿಜೆಪಿ ಭ್ರಷ್ಟಾಚಾರದ ಕುರಿತು ಮಾತನಾಡುತ್ತಿರುವುದು ಹಾಸ್ಯಾಸ್ಪದ. ವಿಜಯೇಂದ್ರ ಮೇಲೆ ಎಷ್ಟು ಆರೋಪಗಳಿವೆ?, ಪ್ರಜ್ವಲ್ ರೇವಣ್ಣ ವಿರುದ್ಧ ಎಷ್ಟು ಆರೋಪಗಳಿವೆ? ಅಂತವರು ತಾವೇ ಅತ್ಯಂತ ಸಭ್ಯರೆಂಬ ಸೋಗಿನಲ್ಲಿ ತಮ್ಮ ರಾಜಕೀಯ ಜೀವನದುದ್ದಕ್ಕೂ ಜನಪರ ಕಾಳಜಿ ಹೊಂದಿದ ಮುಖ್ಯಮಂತ್ರಿ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಬಡಜನರ ಜೊತೆ ನಿಂತ ಸಿಎಂ ಅನ್ನು ಮುಗಿಸಲು ಮುಂದಾಗಿದ್ದಾರೆ ಎಂದು ಅವರು ದೂರಿದರು.
ಆರೋಪಗಳ ಕುರಿತು ಕಾನೂನು ತನ್ನದೇ ಕ್ರಮ ವಹಿಸಲಿದೆ. ಈ ಬಗ್ಗೆ ನಮಗೆ ಯಾವುದೇ ಅಳುಕಿಲ್ಲ. ನಿಜವಾಗಿಯೂ ಸಮಸ್ಯೆ ಇದ್ದರೆ ಕಾನೂನಿನ ಮೊರೆ ಹೋಗಲಿ. ಅದರ ಬದಲಾಗಿ ಪ್ರತಿದಿನ ಸಿದ್ದರಾಮಯ್ಯ ಅವರ ವಿರುದ್ಧ ಪದೇ ಪದೇ ಭ್ರಷ್ಟಾಚಾರ ಆರೋಪ ಮಾಡುವುದು ಸರಿಯಲ್ಲ. ಅವರು ಗ್ಯಾರಂಟಿ ಯೋಜನೆಗಳು, ಸಿಎಂ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ, ಸಚಿವರಾದ ಎಂ.ಬಿ.ಪಾಟೀಲ್, ಕೆ.ಎನ್.ರಾಜಣ್ಣ, ಎಸ್.ಎಸ್.ಮಲ್ಲಿಕಾರ್ಜುನ, ಡಾ.ಶರಣಪ್ರಕಾಶ್ ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಭೈರತಿ ಸುರೇಶ್, ಚೆಲುವರಾಯಸ್ವಾಮಿ, ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
‘ಕಾಂಗ್ರೆಸ್ ಬಡವರ ಪರವಾಗಿದೆ ಎಂದು ಅವರಿಗೂ ಗೊತ್ತಿದೆ. ಹಿಂದಿನ ಚುನಾವಣೆ ಕರ್ನಾಟಕದಲ್ಲಿ ಬಡವರು-ಶ್ರೀಮಂತರ ನಡುವೆ ಇತ್ತು. ಆದ್ದರಿಂದಲೇ 135 ಸೀಟುಗಳೊಂದಿಗೆ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದೇವೆ. ಕೇಂದ್ರ ಸರಕಾರ ಕರ್ನಾಟಕಕ್ಕೆ ಮಾಡಿರುವ ತಾರತಮ್ಯ ಕುರಿತು ಯಾರೂ ಮಾತನಾಡುತ್ತಿಲ್ಲ. ನಿರ್ಮಲಾ ಸೀತಾರಾಮನ್ ಇಲ್ಲಿಂದಲೇ ಆಯ್ಕೆಯಾಗಿದ್ದರೂ ಯಾವುದೇ ನೆರವು ಒದಗಿಸಿಲ್ಲ. ಸೀಮಿತ ಸಂಪನ್ಮೂಲದೊಂದಿಗೆ ಸರಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕೇಂದ್ರ ಸರಕಾರ ಬೆಂಬಲ ನೀಡುವ ಬದಲಿಗೆ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ನಾವು ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ’
-ಕೆ.ಸಿ.ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ