ವಿದೇಶಿ ಪ್ರವಾಸಿಗರ ಸುರಕ್ಷತೆಗೆ ಕ್ರಮ ವಹಿಸಲು ರಾಜ್ಯ ಸರಕಾರದ ಸುತ್ತೋಲೆ

Update: 2025-03-11 19:26 IST
ವಿದೇಶಿ ಪ್ರವಾಸಿಗರ ಸುರಕ್ಷತೆಗೆ ಕ್ರಮ ವಹಿಸಲು ರಾಜ್ಯ ಸರಕಾರದ ಸುತ್ತೋಲೆ
  • whatsapp icon

ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳಲ್ಲಿನ ಎಲ್ಲ ಹೋಮ್‍ಸ್ಟೇಗಳು ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರ ಮಂಗಳವಾರ ಸುತ್ತೋಲೆ ಹೊರಡಿಸಿದೆ.

ಒಳಾಡಳಿತ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಸುತ್ತೋಲೆ ಹೊರಡಿಸಿದ್ದು, ‘ಪ್ರವಾಸಿಗರನ್ನು ಹೊರವಲಯ ಅಥವಾ ನಿರ್ಜನ ಪ್ರದೇಶಗಳಿಗೆ ಕೊರೆದೊಯ್ಯುವಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿ ಪಡೆಯುವುದು ಕಡ್ಡಾಯ. ಪೊಲೀಸ್ ಅಥವಾ ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಪ್ರವಾಸಿಗರನ್ನು ಕರೆದೊಯ್ದು ದುರ್ಘಟನೆ ಸಂಭವಿಸಿದರೆ ರೆಸಾರ್ಟ್, ಹೋಮ್‍ಸ್ಟೇಗಳ ಮಾಲಕರೇ ಜವಾಬ್ದಾರರು’ ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರವಾಸಿಗರಿಗೆ ದುಷ್ಕರ್ಮಿಗಳಿಂದ ಅಥವಾ ಕಾಡುಪ್ರಾಣಿಗಳಿಂದ ಯಾವುದೇ ರೀತಿಯ ತೊಂದರೆಯಾದರೆ ರೆಸಾರ್ಟ್, ಹೋಮ್‍ಸ್ಟೇ ಮಾಲಕರೇ ಸಂಪೂರ್ಣ ಜವಾಬ್ದಾರರಾಗಲಿದ್ದು, ಕಾನೂನಿನ ಅನ್ವಯ ಶಿಕ್ಷಾರ್ಹ ಅಪರಾಧ. ಈ ಸಂಬಂಧ ಎಲ್ಲ ರೆಸಾರ್ಟ್ ಮತ್ತು ಹೋಮ್‍ಸ್ಟೇಗಳಿಂದ ಮುಚ್ಚಳಿಕೆ ಪಡೆದುಕೊಳ್ಳಬೇಕು. ಅಲ್ಲದೆ ರೆಸಾರ್ಟ್ ಮತ್ತು ಹೋಮ್‍ಸ್ಟೇಗಳ ಸ್ಥಳ ವೀಕ್ಷಣಾ ಕಾರ್ಯ ಚಟುವಟಿಕೆಗಳ ಪಟ್ಟಿಯನ್ನು ಪಡೆದು ಮಾ.18ರ ಒಳಗಾಗಿ ವರದಿ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದಲ್ಲಿನ ರೆಸಾರ್ಟ್ ಮಾಲಕಿ ಹಾಗೂ ಇಸ್ರೇಲ್ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿದೇಶಿ ಪ್ರವಾಸಿಗರ ಸುರಕ್ಷತೆಗಾಗಿ ಮೇಲ್ಕಂಡ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News